ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ನಾಳೆ ಗಣೇಶನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೈದಾನದ ಸುತ್ತಮುತ್ತಲೂ ಹು-ಧಾ ಪೊಲೀಸ್ ಕಮೀಷನರೇಟ್‌ನಿಂದ ಬಂದೋಬಸ್ತ್ ಕಲ್ಪಿಸಲಾಗಿದೆ.
ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಹು-ಧಾ ಅವಳಿನಗರದಲ್ಲಿ ಪಾಲಿಕೆಯಡಿ 1500 ಹಾಗೂ ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 500 ಸೇರಿ ಒಟ್ಟು 2000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ ಗಣೇಶೋತ್ಸವ ಮುಗಿಯುವವರೆಗೆ ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇಂದು ಈದ್ಗಾ ಮೈದಾನದಲ್ಲಿ ಶುದ್ಧಿ ಮತ್ತು ಹಂದರಗಂಬ ಪೂಜೆ ಹಾಗೂ ಕೇಸರಿ ಭಗವಾಧ್ವಜ ಇಟ್ಟು ಪೂಜೆ ಬಳಿಕ ಗಣೇಶನ ಮಂಟಪ ಹಾಕುವ ಕಾರ್ಯ ಜರುಗಿತು. ಪೂಜಾ ಕಾರ್ಯಕ್ರಮದಲ್ಲಿ ಹಲವು ಜನರು ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಮೈದಾನದಲ್ಲಿ ಯಾವುದೇ ಬಾವುಟಕ್ಕೆ ಅವಕಾಶವಿಲ್ಲದಿದ್ದರೂ ಕೂಡ ಭಗವಾಧ್ವಜ ಹಾರಾಟ ಕಂಡು ಬಂತು.
ಈ ವೇಳೆ ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜೀವ್ ಬಡಸ್ಕರ್, ಹಿಂದೂಪರ ಸಂಘಟನೆಗಳ ಮುಖಂಡರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈದ್ಗಾ ಮೈದಾನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ : ಇಂದು ಈದ್ಗಾ ಮೈದಾನದಲ್ಲಿ ಅಂತರಗಂಬ ಪೂಜಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಚಿತ್ರೀಕರಣಕ್ಕೆ ಹು-ಧಾ ಪೊಲೀಸ್ ಕಮೀಷನರೇಟ್ ನಿಷೇಧ ಹೇರಿದೆ.
ಬಿಜೆಪಿಯಲ್ಲಿ ಟಿಕೆಟ್ ಮಾರಾಟ ಪದ್ಧತಿಯಿಲ್ಲ: ಬಿಜೆಪಿಯಲ್ಲಿ ಟಿಕೆಟ್ ಮಾರಾಟ ಪದ್ಧತಿಯಿಲ್ಲ. ಕೆಲವು ತಮ್ಮ ಚಟಕ್ಕೆ ಮಾಡಿದ್ರೆ ಅದಕ್ಕೆ ಬಿಜೆಪಿ ಉತ್ತರ ಕೊಡುವುದಿಲ್ಲ. ಇದಕ್ಕೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಸ್ಪಷ್ಟಪಡಿಸಿದರು.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದು ಮೈದಾನ ಶುದ್ಧಿ ಮತ್ತು ಅಂತರಗಂಬ ಪೂಜೆ ಮಾಡಿದ ಬಳಿಕ ಮಾತನಾಡಿದ ಅವರು, ಮಾಜಿ ಸಿಎಂ ಹೇಗೆ ಟಿಕೆಟ್ ತೆಗೆದುಕೊಂಡಿದ್ದರು. ತಾವು ಹೇಗೆ ಟಿಕೆಟ್ ಕೊಟ್ಟಿದ್ದರು ಅಂತ ಎಲ್ಲ ಗೊತ್ತಿದೆ ಎಂದು ನೇರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಕುಟುಕಿದರು.
ಪಾಲಿಕೆ ನಿರ್ಧಾರಕ್ಕೆ ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಸ್ವಾಗತ : ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ಬೆನ್ನಲ್ಲೇ ಪಾಲಿಕೆ ಕ್ರಮವನ್ನು ಶಾಸಕರಾದ ಮಹೇಶ ಟೆಂಗಿನಕಾಯಿ (ಸೆ 16-2023) ಸ್ವಾಗತಿಸಿದ್ದರು. ಕಾಂಗ್ರೆಸ್ ಹಿಂಬಾಗಿಲಿನಿಂದ ಅಂಜುಮನ್ ಸಂಸ್ಥೆ ಮೂಲಕ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಕೊನೆ ಕ್ಷಣದಲ್ಲಿಯಾದರು ಸರ್ಕಾರ ಎಚ್ಚೆತ್ತುಕೊಂಡು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಮುಂದೆ ಕೂಡ ಹಿಂದೂ ಹಬ್ಬಗಳ ಆಚರಣೆಗೆ ಅಡೆತಡೆಗಳನ್ನು ಒಡ್ಡಬಾರದು. ನ್ಯಾಯಾಲಯ ಅತ್ಯುತ್ತಮ ತೀರ್ಪು ಕೊಟ್ಟಿದೆ, ನಮಗೆ ದೊಡ್ಡ ಜಯ ಸಿಕ್ಕಿದೆ. ಈದ್ಗಾ ಮೈದಾನದಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:18 ಷರತ್ತು ವಿಧಿಸಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕೊನೆಗೂ ಅನುಮತಿ