ಹುಬ್ಬಳ್ಳಿ:ಕೊರೊನಾ ಉಲ್ಬಣಿಸಿದ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿತ್ತು. ಆದರೆ ಈ ವೇಳೆಗಾಗಲೇ ಉತ್ತರ ಪ್ರದೇಶದ ಅಮ್ಯೂಸ್ಮೆಂಟ್ ಪಾರ್ಕ್ನ ಕೆಲಸಗಾರರು ಹಾಗೂ ಜಾದುಗಾರ ಕಲಾವಿದರು ಕಲಘಟಗಿ ಜಾತ್ರೆಗೆ ಬಂದಿದ್ರು. ಹೀಗಾಗಿ ಲಾಕ್ಡೌನ್ಗೆ ಸಿಲುಕಿ ಈಗ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಾತ್ರೆಗೆ ಬಂದು 'ಲಾಕ್' ಆದ ಅಮ್ಯೂಸ್ಮೆಂಟ್ ಪಾರ್ಕ್ ಕಲಾವಿದರು: ಉದ್ಯೋಗವಿಲ್ಲದೇ ಪರದಾಟ
ಕೊರೊನಾ ಲಾಕ್ಡೌನ್ ಹಿನ್ನೆಲೆ ಜಾತ್ರೆಗಳು ನಡೆಯದ ಕಾರಣ ಹೊರರಾಜ್ಯದಿಂದ ಬಂದಿದ್ದ ಅಮ್ಯೂಸ್ಮೆಂಟ್ ಪಾರ್ಕ್ ಕೆಲಸಗಾರರು, ಕಲಾವಿದರು ಕೆಲಸವಿಲ್ಲದೇ ಜೀವನ ಸಾಗಿಸಲು ಪರಿತಪಿಸುವಂತಾಗಿದೆ.
ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ಕಲಘಟಗಿ ಶ್ರೀ ಗ್ರಾಮದೇವಿ ಜಾತ್ರೆಗೆ ಮಾರ್ಚ್ ತಿಂಗಳಲ್ಲಿ ಆಗಮಿಸಿದ್ದ ಅಮ್ಯೂಸ್ಮೆಂಟ್ ಪಾರ್ಕ್ನ ಕೆಲಸಗಾರರು ಮತ್ತು ಜಾದುಗಾರ ಕಲಾವಿದರು ಲಾಕ್ಡೌನ್ ಕಾರಣ ಕಲಘಟಗಿಯಲ್ಲಿ ಉಳಿದುಕೊಂಡಿದ್ದರು. ಆದರೆ, ಈಗ ಅವರಿಗೆ ಉದ್ಯೋಗ ಇಲ್ಲದೇ ಜೀವನ ನಡೆಸುವುದೇ ಕಷ್ಟವಾಗಿದೆ.
ಸುಮಾರು ಮೂವತ್ತು ಅಮ್ಯೂಸ್ಮೆಂಟ್ ಕೆಲಸಗಾರರು, ಕಲಾವಿದರು ತಮ್ಮ ಕುಟುಂಬಗಳೊಂದಿಗೆ ಕಲಘಟಗಿಯಲ್ಲಿಯೆ ಗುಡಿಸಲು ಹಾಕಿ ಉಳಿಯ ಬೇಕಾದ ಪ್ರಸಂಗ ಬಂದೊದಗಿದೆ. ಕಳೆದ ಆರು ತಿಂಗಳಿಂದ ಜಾತ್ರೆಗಳು ನಡೆಯದ ಕಾರಣ, ಪ್ರದರ್ಶನಗಳು ಇಲ್ಲದೇ ಕಂಗಲಾಗಿದ್ದಾರೆ. ಇನ್ನೂ ಲಾಕ್ಡೌನ್ ನಿಂದ ಜೀವನ ಕಷ್ಟವಾಗಿದ್ದು, ಸಾಮಗ್ರಿಗಳನ್ನು ಸಾಗಿಸಲು ಆಗದೇ ಉಳಿದಿದ್ದೇವೆ. ಹೀಗಾಗಿ ಸರ್ಕಾರ ಸಹಾಯ ಮಾಡಬೇಕು ಎಂದು ಜಾದುಗಾರ ಕಲಾವಿದರು ಮನವಿ ಮಾಡಿದ್ದಾರೆ.