ಧಾರವಾಡ: ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ರಕ್ತದಾನ ಮಾಡೋಕೆ ಜನರು ಬರುತ್ತಿರಲಿಲ್ಲ. ಹೀಗಾಗಿ ಶಿಬಿರಗಳೇ ನಡೆಯದ ಕಾರಣ ರಕ್ತ ಭಂಡಾರಕ್ಕೆ ತುರ್ತು ರಕ್ತದ ಅವಶ್ಯಕತೆ ಎದುರಾಗಿತ್ತು. ಇದನ್ನು ಮನಗಂಡಿರುವ ಧಾರವಾಡದ ಜನತೆ ನಗರದ ಮಸೀದಿಯೊಂದರಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಿ ಮಾನವೀಯ ಕಾರ್ಯ ಮಾಡಿದ್ದಾರೆ.
ಕೊರೊನಾ ಭಯ, ರಕ್ತದಾನಕ್ಕೆ ಜನ ಹಿಂದೇಟು: ಮಸೀದಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ - voluntary blood donation camp at mosque
ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ತುರ್ತು ರಕ್ತದ ಅವಶ್ಯಕತೆ ಮನಗಂಡ ಜಿಲ್ಲೆಯ ಜನತೆ, ನಗರದ ಮಸೀದಿಯೊಂದರಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಿದ್ದಾರೆ.
ಧಾರವಾಡದ ಜಕ್ಕನಿಬಾವಿ ಬಳಿಯ ಮಹಮ್ಮದ್ ಮಸೀದಿಯಲ್ಲಿ ರಕ್ತದಾನ ಕಾರ್ಯ ನಡೆದಿದೆ. ಜಿಲ್ಲಾಸ್ಪತ್ರೆಯ ರಕ್ತ ಭಂಡಾರದೊಂದಿಗೆ ಜಮಾತೆ ಅಹಲೆ ಹದೀಸ್ ಟ್ರಸ್ಟ್ ಕೈ ಜೋಡಿಸಿ ಈ ಕಾರ್ಯ ಮಾಡಿದೆ. ಮಸೀದಿಯ ಪ್ರಾಂಗಣದಲ್ಲಿಯೇ ರಕ್ತದಾನ ಶಿಬಿರ ನಡೆಸಲಾಗಿದೆ.
ಸಾಕಷ್ಟು ಜನ ಇಲ್ಲಿಗೆ ಬಂದು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಜನಿಸಿರುವ ಒಂದು ಮಗು ಕೇವಲ 900 ಗ್ರಾಂ ಮಾತ್ರ ತೂಕವುಳ್ಳದ್ದಾಗಿತ್ತು. ಆ ಮಗುವಿಗೆ ತುರ್ತು ರಕ್ತದ ಅಗತ್ಯವೂ ಎದುರಾಗಿತ್ತು. ಇಲ್ಲಿ ನಡೆದ ರಕ್ತದಾನ ಶಿಬಿರದಿಂದ ಆ ಮಗುವಿನ ಜೀವ ಉಳಿಸುವುದಕ್ಕೂ ಸಹಾಯವಾಗಿದ್ದು, ಇಲ್ಲಿ ಪಡೆಯಲಾದ ರಕ್ತವನ್ನೇ ಬಳಸಿಕೊಂಡು ಆ ಮಗುವಿಗೆ ಚಿಕಿತ್ಸೆ ನೀಡುತ್ತೇವೆ ಎಂದು ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ಮುಖ್ಯಸ್ಥರು ಹೇಳಿದ್ದಾರೆ.