ಹುಬ್ಬಳ್ಳಿ:ಮೊದಲೇ ನಷ್ಟದಲ್ಲಿದ್ದ ಬಿಆರ್ಟಿಎಸ್ ಸಂಸ್ಥೆಗೆ ಲಾಕ್ಡೌನ್ ಬರಸಿಡಿಲಂತೆ ಬಡಿದಿದೆ. ಲಾಕ್ಡೌನ್ನಿಂದ ಬಸ್ ಸಂಚಾರ ಸ್ಥಗಿತವಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಮೇ 17ರಿಂದ ಬಸ್ ಸಂಚಾರ ಆರಂಭವಾದರೂ ಮತ್ತಷ್ಟು ನಷ್ಟ ಹೆಚ್ಚಾಗುವ ಆತಂಕ ಅಧಿಕಾರಿಗಳಿಗೆ ಎದುರಾಗಿದೆ.
ಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚರಿಸುತ್ತಿರುವ ಬಿಆರ್ಟಿಎಸ್ ಬಸ್ ಸಂಚಾರ ಲಾಕ್ಡೌನ್ನಿಂದಾಗಿ ಸ್ಥಗಿತವಾಗಿದೆ. ಲಾಕ್ಡೌನ್ಗೂ ಮೊದಲೇ ಪ್ರತಿನಿತ್ಯ 8 ಲಕ್ಷ ರೂಪಾಯಿ ಸಂಸ್ಥೆ ನಷ್ಟ ಅನುಭವಿಸುತ್ತಿತ್ತು. ಈ ನಷ್ಟದಿಂದ ಹೇಗೆ ಹೊರ ಬರೋದು ಎಂದು ಅಧಿಕಾರಿಗಳು ಚಿಂತನೆ ನಡೆಸುತ್ತಿರುವಾಗಲೇ ಲಾಕ್ಡೌನ್ನಿಂದ ಬಿಆರ್ಟಿಎಸ್ ಸಂಸ್ಥೆಗೆ ಹೊಡೆತ ಬಿದ್ದಿದೆ.
ಅವಳಿ ನಗರದ ನಡುವೆ ಪ್ರತಿನಿತ್ಯ ನೂರಕ್ಕೂ ಹೆಚ್ಚಿನ ಬಸ್ಗಳು ಸಂಚಾರ ಮಾಡ್ತಿದ್ವು. ಆದರೀಗ ಬಸ್ ಸಂಚಾರ ಸಂಪೂರ್ಣವಾಗಿ ನಿಂತಿದ್ದು, ಇದರಿಂದಾಗಿ ದಿನವೊಂದಕ್ಕೆ 15 ಲಕ್ಷ ನಷ್ಟ ಸಂಭವಿಸುತ್ತಿದೆ. ಇದುವರೆಗೆ 7 ಕೋಟಿಗೂ ಹೆಚ್ಚಿನ ನಷ್ಟವನ್ನ ಈ ಸಂಸ್ಥೆ ಅನುಭವಿಸಿದೆ. ಮೇ 17ರಿಂದ ಬಸ್ ಸಂಚಾರ ಆರಂಭವಾದ್ರೆ ಸಂಸ್ಥೆ ನಷ್ಟವನ್ನು ಸರಿದೂಗಿಸಲು ಮತ್ತಷ್ಟು ಬಸ್ ದರ ಹೆಚ್ಚಿಸಿದ್ರೂ ಆಶ್ಚರ್ಯ ಪಡಬೇಕಿಲ್ಲ.
ಒಂದು ಕಡೆ ಅವಳಿ ನಗರದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಜೊತೆಗೆ ಬಹತೇಕ ಮಾರುಕಟ್ಟೆಗಳು ಓಪನ್ ಆಗಿವೆ. ಮೇ 17ರಿಂದ ಮತ್ತೆ ಬಸ್ ರಸ್ತೆಗಿಳಿಯುವ ಮುನ್ಸೂಚನೆಯನ್ನ ಅಧಿಕಾರಿಗಳು ನೀಡುತ್ತಿದ್ದಾರೆ. ಆದ್ರೆ ಲಾಕ್ಡೌನ್ ಇಲ್ಲದಿದ್ದಾಗ ಪ್ರತಿನಿತ್ಯ 8 ಲಕ್ಷ ನಷ್ಟ ಅನಿಭವಿಸಿದ್ದ ಸಂಸ್ಥೆ, ಈಗ ಸಾಮಾಜಿಕ ಅಂತರ ಕಾಪಾಡಿಕೊಂಡು ಅರ್ಧದಷ್ಟು ಪ್ರಯಾಣಿಕರನ್ನ ಮಾತ್ರ ಕರೆದುಕೊಂಡು ಹೋಗಬೇಕಿರುವುದರಿಂದ ಮತ್ತಷ್ಟು ಆರ್ಥಿಕ ನಷ್ಟ ಉಂಟಾಗಲಿದೆ.
ಈ ಹಿಂದೆ ನಷ್ಟ ಸರಿಪಡಿಸುವುದಕ್ಕಾಗಿ 22 ರೂಪಾಯಿ ಇದ್ದ ಬಸ್ ದರವನ್ನ 28 ರೂಪಾಯಿ ಮಾಡಲಾಗಿತ್ತು. ಈಗ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ನಷ್ಟ ಸರಿದೂಗಿಸಲು ಬಸ್ ಟಿಕೆಟ್ ದರ ಮತ್ತಷ್ಟು ಹೆಚ್ಚಿಸುವ ಚಿಂತನೆಯಲ್ಲಿದ್ದಾರೆ. ಮತ್ತೊಂದೆಡೆ ಸಾರ್ವಜನಿಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಬೆಳಸುತ್ತೇವೆ. ಕೂಡಲೇ ಬಿಆರ್ಟಿಎಸ್ ಸೇವೆ ಪ್ರಾರಂಭ ಮಾಡುವಂತೆ ಮನವಿ ಮಾಡಿದ್ದಾರೆ.