ಧಾರವಾಡ: ವಿಮೆ ಹಣ ನಿರಾಕರಿಸಿದ ಯುನಿವರ್ಸಲ್ ಸೋಂಪೊ ವಿಮಾ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ತರಿಕೇರಿ ತಾಲೂಕಿನ ಅಜ್ಜಂಪುರದ ನಿವಾಸಿ ಫಯಾಜ್ ರೆಹಮಾನ್ರವರ ಒಣ ಮೆಣಸಿನಕಾಯಿ ತುಂಬಿದ ಲಾರಿ ದಿ:24/03/2021 ರಂದು ಹಾವೇರಿ ಜಿಲ್ಲೆಯ ಹಲಗೇರಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿತ್ತು. ಲಾರಿ ಜಖಂಗೊಂಡ ಹಿನ್ನೆಲೆ ಅದರ ರಿಪೇರಿಗಾಗಿ 4 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು.
ಆ ಲಾರಿ ಯುನಿವರ್ಸಲ್ ಸೋಂಪೊ ವಿಮಾ ಕಂಪನಿಯಿಂದ ವಿಮೆಗೆ ಒಳಪಟ್ಟಿತ್ತು. ಲಾರಿಯನ್ನು ಶಿವಮೊಗ್ಗದ ಅಧಿಕೃತ ಸರ್ವಿಸ್ ಸ್ಟೇಷನ್‍ನಲ್ಲಿ ರಿಪೇರಿ ಮಾಡಿಸಲಾಗಿದ್ದು, ಅದರ ರಿಪೇರಿ ಖರ್ಚು ವೆಚ್ಚ 4 ಲಕ್ಷ ರೂಪಾಯಿ ಕೊಡುವಂತೆ ವಿಮಾ ಕಂಪನಿಗೆ ದೂರುದಾರ ಬೇಡಿಕೆ ಸಲ್ಲಿಸಿದರೂ ಅಪಘಾತ ಸಮಯದಲ್ಲಿ ಲಾರಿಯಲ್ಲಿ ಇಬ್ಬರೂ ಪ್ರಯಾಣಿಕರು ಇದ್ದ ಕಾರಣ ವಿಮಾ ಪಾಲಿಸಿಯ ಷರತ್ತನ್ನು ಲಾರಿ ಮಾಲೀಕ ಉಲ್ಲಂಘಿಸಿದ್ದಾನೆ ಅನ್ನುವ ಕಾರಣದ ಮೇಲೆ ವಿಮಾ ಹಣ ನೀಡಲು ಕಂಪನಿ ನಿರಾಕರಿಸಿತ್ತು.
ಆ ರೀತಿ ನಿರಾಕರಣೆ ಸೇವಾ ನ್ಯೂನತೆ ಆಗುತ್ತದೆ ಮತ್ತು ಅದರಿಂದ ತನಗೆ ತೊಂದರೆ ಆಗಿದೆ ಅಂತಾ ವಿಮಾ ಕಂಪನಿಯ ಮೇಲೆ ಕ್ರಮ ಕೈಗೊಂಡು ಪರಿಹಾರದ ಹಣ ಕೊಡಿಸುವಂತೆ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪಿ.ಸಿ.ಹಿರೇಮಠ ಸದಸ್ಯರು ದೂರುದಾರರ ಲಾರಿ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದರೂ ಮತ್ತು ವಿಮಾ ಪಾಲಸಿ ಚಾಲ್ತಿಯಿದ್ದಾಗ ಆ ಲಾರಿಯ ರಿಪೇರಿಗೆ ತಗುಲಿದ ಎಲ್ಲ ಖರ್ಚು ವೆಚ್ಚ ಭರಿಸುವುದು ವಿಮಾ ಕಂಪನಿಯ ಕರ್ತವ್ಯವಾಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ಈ ತೀರ್ಪು ನೀಡಿದೆ.
ಈ ಬಗ್ಗೆ ಯುನಿವರ್ಸಲ್ ಸೋಂಪೋ ಕಂಪನಿಯವರು ದೂರುದಾರರಿಗೆ 3,15,942 ವಿಮಾ ಹಣ ನೀಡುವಂತೆ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ 50,000 ರೂ. ಪರಿಹಾರ ಮತ್ತು ರೂ.10,000 ರೂಪಾಯಿ ಪ್ರಕರಣದ ಖರ್ಚು ವೆಚ್ಚ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.
ಇದನ್ನೂ ಓದಿ:ಸ್ಪೇಸ್ ವುಡ್ ಮಾಡ್ಯುಲರ್ ಕಿಚನ್‌ನಿಂದ ಸೇವಾ ನ್ಯೂನತೆ: ಗ್ರಾಹಕರಿಗೆ ₹1 ಲಕ್ಷ ಪರಿಹಾರ ನೀಡಲು ಸೂಚನೆ