ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅವಳಿನಗರದ ಸ್ವಚ್ಛತೆ ಹಾಗೂ ನೈರ್ಮಲೀಕರಣ ಮಹಾನಗರಕ್ಕೆ ದೊಡ್ಡ ಸವಾಲಾಗಿದ್ದು, ಇದಕ್ಕೆ ಮುಕ್ತಿ ನೀಡಲು ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದೆ.
ಸಾರ್ವಜನಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಐಷಾರಾಮಿ (ಆಕಾಂಕ್ಷಿ ಶೌಚಾಲಯ) ಸಾರ್ವಜನಿಕ ಶೌಚಾಲಯ ಹಾಗೂ 18 ಸಾರ್ವಜನಿಕ ಮೂತ್ರಾಲಯಗಳ ನಿರ್ಮಾಣಕ್ಕೆ ಕೈಹಾಕಿದೆ.
ಈ ಸಂಬಂಧ ಈಗಾಗಲೇ 81.08 ಲಕ್ಷ ರೂ. ಟೆಂಡರ್ ಕರೆಯಲಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣವಾಗಲಿವೆ. ಧಾರವಾಡದ ಮೀನು ಮಾರುಕಟ್ಟೆ ಬಳಿ ಐಷಾರಾಮಿ ಶೌಚಾಲಯ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ. ಮೂತ್ರಾಲಯವನ್ನು ಯಾವ್ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎನ್ನುವ ಕುರಿತು ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ 11 ಸ್ಥಳಗಳನ್ನು ಅಂತಿಮಗೊಳಿಸಿದ್ದಾರೆ. ಸಾರ್ವಜನಿಕ ಮೂತ್ರಾಲಯಗಳಿಲ್ಲದ, ಸಾರ್ವಜನಿಕರಿಗೆ ಅನುಕೂಲವಾಗುವ ಧಾರವಾಡದ ಏಳು ಹಾಗೂ ಹುಬ್ಬಳ್ಳಿಯ 11 ಸ್ಥಳಗಳನ್ನು ಗುರುತಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ.