ಧಾರವಾಡ:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಬಿಡುಗಡೆಗೊಳಿಸಿದೆ. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಟಿಕೆಟ್ ನೀಡಿದ್ದು, ಚುನಾವಣಾ ಕಣ ರಂಗೇರುವಂತೆ ಮಾಡಿದೆ. ವಿನಯ್ ಕುಲಕರ್ಣಿ ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಜಿಲ್ಲೆಯಿಂದ ಹೊರಗಿದ್ದಾರೆ. ಈಗ ಚುನಾವಣೆಗೆ ಪಕ್ಷದ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಜಿಲ್ಲಾ ಪ್ರವೇಶಕ್ಕೆ ಅವಕಾಶ ನೀಡುವಂತೆ ವಿನಯ್ ಮನವಿ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕರು ತಲೆ ಕೆಟ್ಟು ಸುದೀಪ್ ವಿಚಾರದಲ್ಲಿ ಏನೇನೋ ಮಾತನಾಡುತ್ತಿದ್ದಾರೆ: ಬಿಎಸ್ವೈ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಿಂದ ನಿಲ್ಲುವಂತೆ ವಿನಯ್ಗೆ ಕಾಂಗ್ರೆಸ್ ನಾಯಕರು ಒತ್ತಡ ಹಾಕಿದ್ದರು. ಆದರೆ, ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟ ಕಾರಣ, ಅದೇ ಕ್ಷೇತ್ರಕ್ಕೇ ಟಿಕೆಟ್ ಘೋಷಿಸಲಾಗಿದೆ. ಮತ್ತೊಂದೆಡೆ, ವಿನಯ್ ಅಭಿಮಾನಿಗಳು ಸಹ ಕಳೆದ ಕೆಲ ದಿನಗಳ ಹಿಂದೆ ನಿವಾಸದ ಮುಂದೆ ಒಂದು ದಿನ ಪ್ರತಿಭಟನೆ ಮಾಡಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ದೂರು ಇದ್ದರೂ, ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟು ಮಣೆ ಹಾಕಲಾಗಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಅಮೃತ್ ಅಯ್ಯಪ್ಪ ದೇಸಾಯಿ ವಿರುದ್ಧ 53,453 ಮತಗಳನ್ನು ಪಡೆದು ವಿನಯ್ ಜಯ ಸಾಧಿಸಿದ್ದರು. ನಂತರದ 2018ರ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಮೃತ್ ಅಯ್ಯಪ್ಪ ದೇಸಾಯಿ 85,133 ಮತಗಳ ಪಡೆದು ಗೆಲುವು ಕಂಡಿದ್ದರು. ವಿನಯ್ 64,783 ಮತಗಳ ಪಡೆದು 20,340 ಮತಗಳ ಅಂತರದಿಂದ ಸೋತಿದ್ದರು.