ಹುಬ್ಬಳ್ಳಿ: ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮೇಲೆ ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನವನಗರದಲ್ಲಿ ಆದಾಯ ತೆರಿಗೆ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಐಟಿ ಕಚೇರಿ ಬಳಿಯಿರುವ ಪುತ್ಥಳಿಗೆ ಪ್ರತಿಭಟನಾ ನಿರತರು ಬೆಂಕಿ ಹಚ್ಚಲು ಮುಂದಾದಾಗ ಮಾಜಿ ಪಾಲಿಕೆ ಬಸೀರ್ ಅಹ್ಮದ್ ಗುಡಮಾಲೆ ಅವರ ಕಾಲಿಗೆ ಬೆಂಕಿ ತಗುಲಿದ್ದು, ಈ ವೇಳೆ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತ ಬೆಂಕಿ ಆರಿಸಿದ್ದಾನೆ. ಅದೃಷ್ಟವಶಾತ್ ಅನಾಹುತವೊಂದು ತಪ್ಪಿದಂತಾಗಿದೆ.
ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆಯೇ ಐಟಿ, ಇಡಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ತೆರಿಗೆ ಇಲಾಖೆಗಳ ಮೇಲೆ ಒತ್ತಡ ಹಾಕುವ ಮೂಲಕ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಲೇ ದ್ವೇಷದ ರಾಜಕಾರಣ ಮಾಡುತ್ತಿದೆ. ಕೂಡಲೇ ಬಿಜೆಪಿ ದ್ವೇಷದ ರಾಜಕಾರಣವನ್ನು ಕೈಬಿಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಐಟಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲಿಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನಂತರ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಗೊಳಿಸಿದರು.