ಧಾರವಾಡ ಪಾಲಿಕೆ ಸಾಮಾನ್ಯ ಸಭೆ: ಖಾಲಿ ಕೊಡ ಹಿಡಿದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಧಾರವಾಡ: ಧಾರವಾಡ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಗೆ ಕಾಂಗ್ರೆಸ್ ಸದಸ್ಯರು ಜಲ ಮಂಡಳಿ ನೌಕರರ ಪ್ರತಿಭಟನೆ ಬೆಂಬಲಿಸಿ ಖಾಲಿ ಕೊಡದೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದು, ಕಾಂಗ್ರೆಸ್ ಸದಸ್ಯರು ಖಾಲಿ ಕೊಡ ಹಿಡಿದು ಸಭೆಗೆ ನುಗ್ಗಲೆತ್ನಿಸಿದರು. ಒಳಬರದಂತೆ ಅವರನ್ನು ಬಿಜೆಪಿ ಸದಸ್ಯರು ತಳ್ಳಿದರು. ಸದಸ್ಯರ ನಡುವಿನ ತಳ್ಳಾಟ, ನೂಕಾಟದ ನಡುವೆ ಸದಸ್ಯೆ ಸುವರ್ಣ ಕಲಕುಂಟ್ಲ ಅವರಿಗೆ ಗಾಯವಾಗಿ ಕೆಳಗೆ ಬಿದ್ದರು.
ನಂತರ ಕಾಂಗ್ರೆಸ್ ಸದಸ್ಯರನ್ನು ಹೊರಹಾಕಿ ಸಭೆ ನಡೆಸಲಾಯಿತು. ಮತ್ತೆ ಸಭೆಗೆ ಆಗಮಿಸಿದ ಸದಸ್ಯರು ಮೇಯರ್ ವಿರುದ್ದ ದಿಕ್ಕಾರ ಕೂಗಿದರು. ಸಭಾಂಗಣದಲ್ಲಿ ಧಿಕ್ಕಾರ ಕೂಗಿ ಪ್ರತಿಭಟಿಸುತ್ತಿದ್ದಂತೆಯೇ ಮೇಯರ್ ಸಾಮನ್ಯ ಸಭೆಯನ್ನು ಕೆಲಹೊತ್ತು ಮುಂದೂಡಿದರು.
ಇದನ್ನೂ ಓದಿ:ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಬೆಂಕಿ: ಮರಗಳು ಅಗ್ನಿಗಾಹುತಿ
ಕಾಂಗ್ರೆಸ್ ಸದಸ್ಯ ಇಮ್ರಾನ್ ಯಲಿಗಾರ ಮಾತನಾಡಿ, ‘‘ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ತಲೆದೋರಿದೆ. ಬಿಜೆಪಿಯವರು ರಾಜ್ಯದಲ್ಲಿ ಮತ್ತು ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೂ ಸಹ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಕಳೆದೊಂದು ವರ್ಷದಿಂದ ಪ್ರತಿಭಟನೆ, ಪಾದಯಾತ್ರೆ ಮಾಡಿದ್ದೇವೆ. ನಮ್ಮ 8 ತಿಂಗಳ ಹೋರಾಟದಿಂದ ನೌಕರರಿಗೆ 3 ತಿಂಗಳ ಸಂಬಳ ನೀಡಿದ್ದಾರೆ. ಹೊಸದಾಗಿ ನೇಮಕ ಮಾಡಿಕೊಂಡ ನೌಕರರ ಸಂಬಳವನ್ನೂ ಸಹ ಬೇಗ ನೀಡಬೇಕು. ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದಲ್ಲಿ ಸಾಮಾನ್ಯ ಸಭೆ ನಡೆಸಲು ಬಿಡುವುದಿಲ್ಲ ಮತ್ತು ಉಗ್ರ ಹೋರಾಟ ನಡೆಸುತ್ತೇವೆ’’ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ, ‘‘ಸದನದಲ್ಲಿ ಕುಳಿತುಕೊಂಡು ಯಾವ ವಾರ್ಡ್‌ನಲ್ಲಿ ಸಮಸ್ಯೆಯಿದೆ ಎಂಬುದನ್ನು ಚರ್ಚಿಸಬೇಕು. ಅದನ್ನು ಬಿಟ್ಟು ಖಾಲಿ ಕೊಡ ಹಿಡಿದು ಸಭೆಗೆ ಬರುವ ರೀತಿ ಸರಿಯಿಲ್ಲ. ಮುಂಬರುವ ಚುನಾವಣೆ ಪ್ರಚಾರಕ್ಕಾಗಿ ಸದನದ ಹಾದಿ ತಪ್ಪಿಸಲು ಕಾಂಗ್ರೆಸ್ನವರು ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ. ಇದು ನಿಯಮಗಳಿಗೆ ವಿರುದ್ಧ. ಸರಿಯಾದ ರೀತಿಯಲ್ಲಿ ಚರ್ಚೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇನೆ" ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ - ಪೊಲೀಸ್ ಕಮೀಷನರ್ ಗುಪ್ತಾ ಸಖತ್ ಡಾನ್ಸ್