ಹುಬ್ಬಳ್ಳಿ: ಬಿಆರ್ಟಿಎಸ್ ಕಾಮಗಾರಿಗೆ ದರ್ಗಾ ಯಾವುದೇ ರೀತಿಯಲ್ಲಿ ತೊಂದರೆ ಮಾಡಿದ್ದಿಲ್ಲ. ಅಲ್ಲದೇ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಹೀಗಿದ್ದರೂ ಕೂಡ ಸರ್ಕಾರ ದರ್ಗಾವನ್ನು ತೆರವು ಮಾಡಲು ನಿರ್ಧಾರ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಕೆಲ ರಾಜಕೀಯ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಎಎಂ ಹಿಂಡಸಗೇರಿ ವಾಗ್ದಾಳಿ: ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೂರಾರು ವರ್ಷದ ಐತಿಹಾಸಿಕ ಪರಂಪರೆಗೆ ಬಿಜೆಪಿ ಸರ್ಕಾರದ ನಿರ್ಧಾರ ಧಕ್ಕೆ ಉಂಟು ಮಾಡಿದೆ. ಬಿಆರ್ಟಿಎಸ್ ಕಾಮಗಾರಿ ಪೂರ್ಣಗೊಂಡಿದ್ದರೂ ಕೂಡ ಉದ್ದೇಶಪೂರ್ವಕವಾಗಿಯೇ ದರ್ಗಾವನ್ನು ತೆರವು ಮಾಡಲು ಷಡ್ಯಂತ್ರ ರೂಪಿಸಲಾಗಿದೆ. ಇದು ನಿಜಕ್ಕೂ ಖಂಡನೀಯವಾಗಿದೆ. ಈ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಸೌಹಾರ್ದತೆಗೆ ಸಾಕ್ಷಿಯಾಗಿರುವ ನೆಲ. ಇಂತಹ ಪುಣ್ಯ ಭೂಮಿಯಲ್ಲಿ ಬಿಜೆಪಿಯವರು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇಂತಹದೊಂದು ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಒಂದು ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವುದನ್ನು ಬಿಜೆಪಿ ಸರ್ಕಾರ ಕೈ ಬಿಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರು ಬೇಸರ:ಬಿಜೆಪಿಯವರು ಹೇಗಾದರೂ ಮಾಡಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಹಿಡನ್ ಅಜೆಂಡಾದಿಂದಾಗಿ ಹಿಂದೂ-ಮುಸ್ಲಿಂ ಸಮುದಾಯವನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವೇ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಎಂದು ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಿಂದ ಧಾರವಾಡದವರೆಗಿನ ಬಿಆರ್ಟಿಎಸ್ ಕಾರಿಡಾರ್ ಎಲ್ಲೆಡೆ 36 ಮೀಟರ್ ಇದೆ. ಆದರೆ ದರ್ಗಾ ಬಳಿ ಅಧಿಕಾರಿಗಳು ಬರೋಬ್ಬರಿ 44 ಮೀಟರ್ ಗುರುತು ಮಾಡಿದ್ದಾರೆ. ಇದು ಶಾಸಕ ಅರವಿಂದ ಬೆಲ್ಲದ್ ಅವರ ಶೋರೂಂ ಉಳಿಸಲು ಮಾಡಿದ ಹುನ್ನಾರ ಆಗಿದೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಶಾಸಕ ಅಬ್ಬಯ್ಯ ಅಸಮಾಧಾನ: ಬಿಜೆಪಿ ಸರ್ಕಾರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಕೆಲಸ ಮಾಡುತ್ತಿದೆ. ಜನರು ಜ್ವಲಂತ ಸಮಸ್ಯೆಗಳಿಂದ ಸಾಯುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಹಾಗೂ ಅಭಿವೃದ್ಧಿ ಬಗ್ಗೆ ಚಿಂತಿಸುವುದನ್ನು ಬಿಟ್ಟು ಧಾರ್ಮಿಕತೆಗೆ ಧಕ್ಕೆ ತರುವ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಬೇಸರ ವ್ಯಕ್ತಪಡಿಸಿದರು.
ದರ್ಗಾ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಲ್ಲಿ ಮುಸ್ಲಿಂ ಸಮುದಾಯದ ಜನರ ಧಾರ್ಮಿಕ ನಂಬಿಕೆ ಇದೆ. ದರ್ಗಾ ತೆರವು ಮಾಡುವ ಮೂಲಕ ಒಡೆದು ಆಳುವ ನೀತಿಯನ್ನು ಬಿಜೆಪಿಯವರು ಅನುಸರಿಸುತ್ತಿದ್ದಾರೆ. ಜನರು ಸಾಕಷ್ಟು ಜ್ವಲಂತ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಸಾಕಷ್ಟು ಸ್ಥಳಾವಕಾಶ ಇತ್ತು.
ಅಲ್ಲದೇ ಉಣಕಲ್ ಮಾದರಿಯಲ್ಲಿ ಕೂಡ ಈ ದರ್ಗಾವನ್ನು ಉಳಿಸಬಹುದಾಗಿತ್ತು. ಆದರೆ, ಉದ್ದೇಶಪೂರ್ವಕವಾಗಿಯೇ ಇಂತಹದೊಂದು ಕಾರ್ಯಕ್ಕೆ ಬಿಜೆಪಿ ಸರ್ಕಾರ ಮುಂದಾಗಿರುವುದು ನಿಜಕ್ಕೂ ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತೆರವು ಕಾರ್ಯಾಚರಣೆಗೆ ಸಿಎಂ ಮೇಲೆ ಒತ್ತಡ: ಬಿಜೆಪಿ ಸರ್ಕಾರ ದರ್ಗಾ ತೆರವು ವಿಚಾರದಲ್ಲಿ ತಾರತಮ್ಯ ಮಾಡಿದೆ. ದರ್ಗಾ ತೆರವು ಮಾಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒತ್ತಡ ತಂದಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಶಾಸಕರೊಬ್ಬರ ಜಾಗೆಯನ್ನು ಬಳಸಿಕೊಳ್ಳದೇ ದರ್ಗಾವನ್ನು ತೆರವು ಮಾಡುತ್ತಿದ್ದಾರೆ ಎಂದು ಹಿರಿಯ ವಕೀಲ ಎಂ.ಆರ್.ಮುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಹಾಗೂ ಬಿಆರ್ಟಿಎಸ್ ಅವರು ಇಂದು ದರ್ಗಾ ತೆರವು ಮಾಡುತ್ತಿದ್ದಾರೆ. ಇಲ್ಲಿನ ದರ್ಗಾಕ್ಕೆ ಮಾತ್ರ 44 ಮೀಟರ್ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಬೇರೆ ಸ್ಥಳಗಳಲ್ಲಿ 35 ಮೀಟರ್ ಮಾತ್ರ ಇದೆ. ದರ್ಗಾ ಮುಂಭಾಗದಲ್ಲಿ ಶಾಸಕರೊಬ್ಬರ ಜಾಗವಿದೆ. ಈ ದರ್ಗಾ ತೆರವು ಮಾಡಿ ಅವರ ಜಾಗವನ್ನು ಯಾಕೆ ಒತ್ತುವರಿ ಮಾಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಓದಿ:ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ದರ್ಗಾ ತೆರವು ಕಾರ್ಯಾಚರಣೆ... ಸಂಚಾರ ಮಾರ್ಗ ಬದಲಾವಣೆ