ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ದರ್ಗಾ ವಿವಾದ ಸಾಕಷ್ಟು ಸದ್ದು ಮಾಡಿತ್ತು. ರಾತ್ರೋರಾತ್ರಿ ಬೈರಿಕೊಪ್ಪ ಹಜರತ್ ಸೈಯದ್ ದರ್ಗಾ ತೆರವು ಸದನದಲ್ಲೂ ಚರ್ಚೆ ಆಗಿತ್ತು. ಆದರೆ ಇದೀಗ ಹುಬ್ಬಳ್ಳಿಯಲ್ಲಿ ಮತ್ತೆ ಪ್ರತಿಮೆ ತೆರೆವು ಹೋರಾಟದ ಕಿಚ್ಚು ಹಚ್ಚಿದೆ. ಫ್ಲೈಓವರ್ ಕಾಮಗಾರಿ ನೆಪದಲ್ಲಿ ಎರಡು ಪ್ರತಿಮೆ ತೆರವು ಮಾಡಲಾಗಿದ್ದು, ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ವಾರ ಸಹಕಾರಿ ರಂಗದ ಭೀಷ್ಮ ದಿವಂಗತ ಕೆ.ಎಚ್ ಪಾಟೀಲ್, ಹಾಗೂ ಜಗಜ್ಯೋತಿ ಬಸವಣ್ಣ ಪ್ರತಿಮೆ ತೆರವು ಮಾಡಲಾಗಿದೆ. ಇದನ್ನು ಖಂಡಿಸಿ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಕಚೇರಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂವತ್ತು ವರ್ಷಗಳ ಹಿಂದೆ ಪಾಲಿಕೆಯಲ್ಲಿ ರೆಸ್ಯುಲೇಶನ್ ಪಾಸ್ ಮಾಡಿ ಕೆ.ಎಚ್ ಪಾಟೀಲ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಫ್ಲೈಓವರ್ ಕಾಮಗಾರಿ ಹೆಸರಲ್ಲಿ ಬಸವಣ್ಣ ಹಾಗೂ ಸಹಕಾರಿ ರಂಗದ ಭೀಷ್ಮ ಕೆ.ಎಚ್ ಪಾಟೀಲ್ ರ ಪ್ರತಿಮೆ ತೆರವು ಮಾಡಲಾಗಿದೆ.
ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ತೆರವು ಮಾಡಿದ್ದಾರೆ. ಈ ಮೂಲಕ ನಮ್ಮ ನಾಯಕರಿಗೆ ಅಪಮಾನ ಮಾಡಿದ್ದು, ಈ ಕುರಿತು ಎರಡು ದಿನದಲ್ಲಿ ನಮ್ಮನ್ನ ಮೀಟಿಂಗ್ಗೆ ಕರೆಸಬೇಕು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದರು. ಅಕಸ್ಮಾತ್ ಎರಡು ದಿನದಲ್ಲಿ ನಮಗೆ ಪಾಲಿಕೆ ಉತ್ತರ ಕೊಡದೇ ಹೋದರೆ ನಾವು ಹೋರಾಟ ಮಾಡ್ತೀವಿ ಎಂದು ಪ್ರಸಾದ್ ಅಬ್ಬಯ್ಯ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.