ಹುಬ್ಬಳ್ಳಿ :ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮೇ.10 ರಂದು ಶಾಂತಿಯುಕ್ತವಾಗಿ ಮುಗಿದಿದೆ.ಬಳಿಕ ಬಂದಂತಹ ಚುನಾವಣೋತ್ತರ ಸಮೀಕ್ಷೆ ಹಲವರಿಗೆ ಅಚ್ಚರಿ ಮೂಡಿಸಿದೆ. ಸಮೀಕ್ಷೆಯಲ್ಲಿ ಮೇಲುಗೈ ಸಾಧಿಸುತ್ತಿದಂತೆ ಕಾಂಗ್ರೆಸ್ ಪಕ್ಷ ಫುಲ್ ಅಲರ್ಟ್ ಆಗಿದೆ.
ಈ ಬಾರಿ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ತಂತ್ರ ರೂಪಿಸಿದ್ದ ಕೈ ಪಕ್ಷ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದೆ. ಫಲಿತಾಂಶ ಹೊರಬೀಳುವ ಮುನ್ನವೇ ಪಕ್ಷೇತರರಿಗೆ ಗಾಳ ಹಾಕಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.
ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ ಹಾಗೂ ಕಾಂಗ್ರೆಸ್ನ ಕುಸುಮಾವತಿ ಶಿವಳ್ಳಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಮೂವರಲ್ಲಿ ತೀವ್ರ ಪೈಪೋಟಿ ಇದ್ದು ಒಂದು ವೇಳೆ ಚಿಕ್ಕನಗೌಡ ಗೆದ್ದರೆ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್‌ಗೆ ಸರಿಯಾದ ಬಹುಮತ ಸಿಗದೇ ಹೋದರೆ ಪಕ್ಷೇತರರನ್ನು ಕರೆತಂದು ಸರ್ಕಾರ ರಚನೆ ಮಾಡಲು ಪ್ಲ್ಯಾನ್ ಮಾಡಿದೆ. ಇದರಿಂದಾಗಿ ಚಿಕ್ಕನಗೌಡರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಖಾಂತರವೇ ಪಕ್ಷಕ್ಕೆ ಕರೆತರಲು ಸಿದ್ದತೆ ಮಾಡಲಾಗಿದೆ. ಎಸ್.ಐ.ಚಿಕ್ಕನಗೌಡ ಅವರು ಜಗದೀಶ್ ಶೆಟ್ಟರ್ ಬೆಂಬಲಿಗ ಕೂಡ ಹೌದು. ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕುಕ್ಕರ್ ಗುರುತಿನೊಂದಿದೆ ಸ್ಪರ್ಧೆ ಮಾಡಿದ್ದರು.