ಹುಬ್ಬಳ್ಳಿ :ಕಾಂಗ್ರೆಸ್ ಕೇವಲ ಪ್ರಚಾರ, ವೋಟ್ ಬ್ಯಾಂಕ್ಗಾಗಿ ಪಾದಯಾತ್ರೆ ನಡೆಸುತ್ತಿದೆ. ಅವರಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ, ವಿಧಾನಮಂಡಲದಲ್ಲಿ ಚರ್ಚಿಸಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಯೋಜನೆ ವಿಚಾರ ಅತ್ಯಂತ ಸೂಕ್ಷ್ಮವಾಗಿದೆ. ಆದರೆ, ಇದನ್ನು ಕಾಂಗ್ರೆಸ್ ರಾಜಕಾರಣಕ್ಕೆ ಬಳಸುತ್ತಿದೆ. ಈ ಮೂಲಕ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ.
ವಿಧಾನಸಭೆ ಕಲಾಪ ನಡೆದಾಗ ಅಲ್ಲಿ ಇವರು ಚರ್ಚೆ ಮಾಡೋದಿಲ್ಲ. ಅದನ್ನು ಬಿಟ್ಟು ಇದೀಗ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಸದನದಲ್ಲಿ ಕಾಂಗ್ರೆಸ್ ವಿನಾಕಾರಣ ಕಾಲಹರಣ ಮಾಡಿ, ಇದೀಗ ಪಾದಯಾತ್ರೆ ಮಾಡುವ ಮೂಲಕ ಹೊರಗೂ ಕಾಲಹರಣ ಮಾಡುತ್ತಿದೆ ಎಂದು ಹರಿಹಾಯ್ದರು.