ಹುಬ್ಬಳ್ಳಿ:ಒಂದು ಹನಿ ನೀರನ್ನೂ ಮಹದಾಯಿಗೆ ನೀಡುವುದಿಲ್ಲ ಎಂದು ಅವರ ಪಕ್ಷದ ನಾಯಕಿ ಸೋನಿಯಾಗಾಂಧಿ ಗೋವಾದಲ್ಲಿ ಹೇಳಿದ್ದರು. ನಂತರ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಕೆನಾಲ್ಗೆ ಗೋಡೆ ಕಟ್ಟಿದ್ದೇ ಕಾಂಗ್ರೆಸ್. ಇದು ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ನ ಸಾಧನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಷಯದಲ್ಲಿ ಬಿಜೆಪಿ ಸರ್ಕಾರವೇ ಹೆಚ್ಚು ಕೆಲಸ ಮಾಡಿದೆ. ಹೋರಾಟದ ವೇಳೆ ರಕ್ತದಲ್ಲಿ ಪತ್ರ ಬರೆದಿದ್ದರಿಂದ ಐದು ಕಿ.ಮೀ ಕೆನಾಲ್ ಅನ್ನು ನಾನು ನೀರಾವರಿ ಸಚಿವನಾಗಿದ್ದಾಗ ನಿರ್ಮಿಸಿದ್ದೇನೆ. ಕಾಂಗ್ರೆಸ್ ನವರಿಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕುಟುಕಿದರು.
ಇದನ್ನೂ ಓದಿ:ಗಡಿ ವಿವಾದ ಸಭೆ ಬಳಿಕ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ಜೊತೆ ಚರ್ಚೆ: ಸಿಎಂ ಬೊಮ್ಮಾಯಿ
ದೆಹಲಿ ಪ್ರವಾಸದ ಕುರಿತು ಮಾತನಾಡಿದ ಅವರು, ದೆಹಲಿಯಲ್ಲಿ ಗೃಹ ಸಚಿವರು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಸಿಎಂಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗುವುದು. ಇನ್ನು, ಈ ಗಡಿ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇರುವ ಕಾರಣ ಅದರ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ ಎಂದರು.
ನಮ್ಮ ಕ್ಲಿನಿಕ್ ಉದ್ಘಾಟನೆ: ಬಡವರಿಗೆ ಉತ್ತಮ ಪ್ರಾಥಮಿಕ ಚಿಕಿತ್ಸೆ ನೀಡಲು ಧಾರವಾಡ ಜಿಲ್ಲೆಯಲ್ಲಿ 7 ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡಲಿದ್ದೇನೆ. ಅದರಂತೆ ರಾಜ್ಯಾದ್ಯಂತ ಒಂದನೇ ಹಂತದಲ್ಲಿ ನೂರು ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದನ್ನು ಉತ್ತೇಜಿಸಲು ಮುಂದಿನ ಬಜೆಟ್ನಲ್ಲಿ ಹಣ ಮೀಸಲು ಇಡಲಾಗುವುದು. ಟೆಲಿಮೆಡಿಸನ್, ರಕ್ತಪರೀಕ್ಷೆ ಸೇರಿದಂತೆ ಇನ್ನಿತರ ಪರೀಕ್ಷೆಗಳು ಆಸ್ಪತ್ರೆಯಲ್ಲಿ ಲಭ್ಯ ಇರಲಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಗ್ಗಾವಿಯವರು ದಡ್ಡರು: ನಗರದ ವಿಮಾನ ನಿಲ್ದಾಣದಲ್ಲಿ ಮಾತು ಆರಂಭಿಸುವ ಮುನ್ನ ಸಹಜವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ನೀವು ಹುಬ್ಬಳ್ಳಿಯವರು ಜಾಣರು. ನಾವು ಶಿಗ್ಗಾವಿ ಗ್ರಾಮೀಣ ಪ್ರದೇಶದ ದಡ್ಡರು ಎನ್ನುವ ಮೂಲಕ ಪರೋಕ್ಷವಾಗಿ ಈ ಭಾಗದ ನಾಯಕರಿಗೆ ಟಾಂಗ್ ಕೊಟ್ಟರು.