ಧಾರವಾಡ: ಸಾಕ್ಷ್ಯನಾಶ ಆರೋಪದಡಿ ತಮ್ಮ ಮೇಲೆ ಕೇಸು ದಾಖಲಿಸಲು ಕೋರ್ಟ್ ಸೂಚನೆ ನೀಡಿರುವ ವಿಚಾರದ ಬಗ್ಗೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ಸಂಸದ ಪ್ರಹ್ಲಾದ್ ಜೋಶಿ ಕಡೆಗೆ ಬೆರಳು ಮಾಡಿದ್ದಾರೆ.
ಇಷ್ಟು ದಿನ ಇವರು ಮಲಗಿಕೊಂಡಿದ್ದರೇನು? ಜೋಶಿ ವಿರುದ್ಧ ವಿನಯ್ ಕುಲಕರ್ಣಿ ಕಿಡಿ - news kannada
ಯಾವತ್ತೋ ಆಗಿರುವ ಪ್ರಕರಣವನ್ನು ಬಿಜೆಪಿ ನಾಯಕರು ಇದೀಗ ಮುನ್ನೆಲೆಗೆ ತರುತ್ತಿದ್ದಾರೆ. ಇಷ್ಟು ದಿನ ಅವರು ಮಲಗಿಕೊಂಡಿದ್ದರೇನು? ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಕಿಡಿಕಾರಿದ್ದಾರೆ.
ನ್ಯಾಯಾಂಗದ ಬಗ್ಗೆ ತಮಗೆ ಅಪಾರ ಗೌರವ ಇದೆ. ಅದು ಯಾವತ್ತೋ ಆಗಿರೋ ಪ್ರಕರಣ. ಚುನಾವಣೆಯಲ್ಲಿಯೇ ಮುನ್ನೆಲೆಗೆ ಬಂದಿದ್ದು ಏಕೆ? ಇದೀಗ ಕೇಸು ಹಾಕಿರುವ ಗುರುನಾಥಗೌಡ ಯಾರ ಜೊತೆ ಇರುತ್ತಾರೆ? ಅವರು ಪ್ರಹ್ಲಾದ್ ಜೋಶಿ ಜೊತೆಯೇ ಇರುತ್ತಾರೆ. ಹಾಗಾದ್ರೆ ಯಾರು ಈ ಕೇಸ್ ಮಾಡಿದಂತಾಯ್ತು? ಅಂತಾ ಜೋಶಿ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಕರಣದಲ್ಲಿ ನಾನು ಆರೋಪಿಯೂ ಅಲ್ಲ, ಎಫ್ಐಆರ್ನಲ್ಲಿ ನನ್ನ ಹೆಸರೂ ಇಲ್ಲ. ಇನ್ನು ಚಾರ್ಜ್ಶೀಟ್ನಲ್ಲಂತೂ ನನ್ನ ಹೆಸರೇ ಇಲ್ಲ. ಆ ಕೇಸ್ನಲ್ಲಿ ಒಟ್ಟು 62 ಸಾಕ್ಷಿಗಳು ಇದ್ದವು. ಅದರಲ್ಲಿ 59 ಸಾಕ್ಷಿಗಳು ಮುಗಿದಿವೆ. ಆದರೆ, ಈಗ ಚುನಾವಣೆ ಬಂದಿದೆ. ಹೀಗಾಗಿ ಪ್ರಹ್ಲಾದ್ ಜೋಶಿ ಇಂಥ ಕುತಂತ್ರ ಮಾಡುತ್ತಿದ್ದಾರೆ. ಧಾರವಾಡದಲ್ಲಿ ಏನೇ ನಡೆದರೂ ಅವರಿಗೆ ವಿನಯ ಕುಲಕರ್ಣಿ ಮಾತ್ರ ಕಾಣುತ್ತಾರೆ. ಮನೆಯನ್ನು ಇಬ್ಭಾಗ ಮಾಡುವಂತಹ ಕುತಂತ್ರಿಗಳಿವರು. ಈ ವಿಚಾರ ಚುನಾವಣೆಯಲ್ಲಿಯೇ ಏಕೆ ಬಂತು? ಇಷ್ಟು ದಿನ ಅವರು ಮಲಗಿಕೊಂಡಿದ್ದರೇನು? ಪ್ರಕರಣ ನಡೆದು 3 ವರ್ಷವಾಯ್ತು. ಇದೆಲ್ಲ ಜೋಶಿಯವರದ್ದೇ ಕುತಂತ್ರ. ಜನ ಇದನ್ನೆಲ್ಲ ನೋಡುತ್ತಿದ್ದಾರೆ ಅಂತಾ ವಿನಯ ಕುಲಕರ್ಣಿ ಹೇಳಿದರು.