ಹುಬ್ಬಳ್ಳಿ:ಕೈಗಾರಿಕೋದ್ಯಮಕ್ಕೆ ಹೊರೆಯಾದ ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ನೀಡಲಾದ ಬಂದ್ ಕರೆಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಕೈಗಾರಿಕಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಬಂದ್‌ಗೆ ಕರೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಿಧ ವಾಣಿಜ್ಯೋದ್ಯಮಿಗಳು ಬಂದ್‌ಗೆ ಬೆಂಬಲ ನೀಡಿದ್ದು, ಧಾರವಾಡ ಜಿಲ್ಲೆಯ ಬಹುತೇಕ ಉದ್ಯಮ ಸ್ತಬ್ಧವಾಗಿವೆ. ಕೈಗಾರಿಕೆ, ಟ್ರಾನ್ಸ್ ಪೋರ್ಟ್, ಅಟೋಮೊಬೈಲ್, ಜವಳಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ನೆಹರೂ ಮೈದಾನದ ಬಳಿ ಇರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಆರಂಭವಾದ ನಗರದ ವಿವಿಧ ಕಡೆ ಸಂಚರಿಸಿ ನಗರದ ತಹಶಿಲ್ದಾರ್ ಕಚೇರಿವರೆಗೂ ನಡೆಯಿತು. ತಹಶಿಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
''ಹಿಂದಿನ ವಿದ್ಯುತ್ ದರವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಬೇಕು. ವಿದ್ಯುತ್ ದರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಒಂದು ವೇಳೆ ಪ್ರಸಕ್ತ ದರವನ್ನು ಜಾರಿಗೊಳಿಸಿದ್ರೆ ಕೈಗಾರಿಕೆಗಳನ್ನು ನಡೆಸುವುದು ತುಂಬಾ ಕಷ್ಟವಾಗುತ್ತದೆ'' ಎಂದು ಕಿಡಿಕಾರಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ್ ಜವಳಿ ಮಾತನಾಡಿ, ಕೆಇಆರ್ಸಿ ಅವರು ಸಾರ್ವಜನಿಕರು, ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸದೆ ಏಕಾಏಕಿಯಾಗಿ ದರ ಏರಿಕೆ ಮಾಡಿದ್ದಾರೆ. ಇದರಿಂದ ಸಣ್ಣ, ಅತೀ ಸಣ್ಣ, ಮಾಧ್ಯಮ ಹಾಗೂ ದೊಡ್ಡ ಕೈಗಾರಿಕೆ ನಡೆಸುವುದು ಕಷ್ಟವಾಗಲಿದೆ. ಕೂಡಲೇ ಕೆಇಆರ್ಸಿ ದರವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಜವಳಿ ವ್ಯಾಪಾರಿ ಮುಖೇಶ ಮಾತನಾಡಿ, ಜವಳಿ ವ್ಯಾಪಾರಕ್ಕೆ ವಿದ್ಯುತ್ ದರ ಏರಿಕೆ ಶಾಕ್ ಕೊಟ್ಟಿದೆ. ಇದರಿಂದ ಜವಳಿ ವ್ಯಾಪಾರ ನಡೆಸುವುದು ಕಷ್ಟವಾಗಿದೆ. ಈ ಹಿಂದೆ ಇದ್ದ ದರ ಸರಿಯಾಗಿತ್ತು. ಆದ್ರೆ ಪರಿಷ್ಕೃತ ದರದಲ್ಲಿ ಭಾರಿ ಏರಿಕೆ ಮಾಡಿದ್ದರಿಂದ ಜವಳಿ ವ್ಯಾಪಾರ ನಡೆಸುವುದು ಕಷ್ಟವಾಗಿದೆ ಎಂದರು. ಜವಳಿ ವರ್ತಕರ ಸಂಘದ ಕಾರ್ಯದರ್ಶಿ ರಾಕೇಶ ಕಠಾರಿಯಾ ಮಾತನಾಡಿ, ವಿದ್ಯುತ್ ದರ ಏರಿಕೆಯಿಂದ ಕಂಪನಿಗಳು ರಾಜ್ಯವನ್ನು ಬಿಟ್ಟು ಹೋಗುವ ಸ್ಥಿತಿ ಎದುರಾಗಿದೆ. ಸರ್ಕಾರ ಮಧ್ಯಪ್ರವೇಶಿಸಿ ಕ್ಯಾಬಿನೆಟ್ನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಹಳೆ ದರವನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಧಾರವಾಡದಲ್ಲಿ ಉತ್ತಮ ಬೆಂಬಲ:ವಿದ್ಯುತ್ ದರ ಏರಿಕೆ ಖಂಡಿಸಿ ಬಂದ್ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಧಾರವಾಡ ಕೆಸಿಸಿ ಬ್ಯಾಂಕ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ವರ್ತಕರು, ವ್ಯಾಪಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.