ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಪೊಲೀಸ್​ ಠಾಣೆಗೆ ಮುತ್ತಿಗೆ ಯತ್ನ: ಆರ್ ಅಶೋಕ್, ಬೆಲ್ಲದ್​ ಸೇರಿ ಹಲವರು ವಶಕ್ಕೆ

ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ್​ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಕರಸೇವಕನ ಬಂಧನಕ್ಕೆ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನ: ಆರ್. ಅಶೋಕ್​ ಸೇರಿ ಹಲವರು ವಶಕ್ಕೆ
ಕರಸೇವಕನ ಬಂಧನಕ್ಕೆ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನ: ಆರ್. ಅಶೋಕ್​ ಸೇರಿ ಹಲವರು ವಶಕ್ಕೆ

By ETV Bharat Karnataka Team

Published : Jan 3, 2024, 4:10 PM IST

Updated : Jan 3, 2024, 5:52 PM IST

ಹುಬ್ಬಳ್ಳಿಯಲ್ಲಿ ಪೊಲೀಸ್​ ಠಾಣೆಗೆ ಮುತ್ತಿಗೆ ಯತ್ನ: ಆರ್ ಅಶೋಕ್, ಬೆಲ್ಲದ್​ ಸೇರಿ ಹಲವರು ವಶಕ್ಕೆ

ಹುಬ್ಬಳ್ಳಿ:31 ವರ್ಷದ ಹಿಂದಿನ ಗಲಭೆಯಪ್ರಕರಣವೊಂದಕ್ಕೆ ಸಂಬಂಧಿಸಿದಂತೆಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ್​ ಪೊಲೀಸ್ ಠಾಣೆ ಎದುರು ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕಾರ್ಯಕರ್ತರು ಶಹರ್​ ಠಾಣೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಮಯದಲ್ಲಿ ಆರ್. ಅಶೋಕ್ ಮತ್ತು ಬಿಜೆಪಿ ಮಹಿಳಾ ಘಟಕದ ಸದಸ್ಯರು ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡ ಪೊಲೀಸ್ ಸಿಬ್ಬಂದಿ ಬಸ್​ನ ಮೂಲಕ ಕರೆದುಕೊಂಡು ಹೋದರು.

ಇದಕ್ಕೂ ‌ಮುನ್ನ ಮಾತನಾಡಿದ ಆರ್. ಅಶೋಕ್​ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ''ಇವತ್ತು ನಾವು ಹೋರಾಟ ಕೈಗೊಂಡಿದ್ದೇವೆ. ಹಿಂದೂ ಕಾರ್ಯಕರ್ತನನ್ನು ಬಿಡುಗಡೆ ಮಾಡಬೇಕು. ಇನ್​ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದರು.

''ರಾಮ‌ಭಕ್ತರನ್ನ‌ ಬಂಧಿಸಿದ್ದನ್ನು ಖಂಡಿಸುತ್ತೇನೆ. ರಾಮ ಭಕ್ತರನ್ನು ಬಂಧನ ಮಾಡುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಸುಮಾರು 56,000 ಪೆಂಡಿಂಗ್ ಎಲ್‌ಪಿ‌ಸಿ ಕೇಸ್​ಗಳು ಇವೆ. ಆದ್ರೆ ಅವೆಲ್ಲವನ್ನು ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ. ಶ್ರೀಕಾಂತ್​ ಪೂಜಾರಿಯನ್ನು ಬಂಧನ ಮಾಡಿದ್ದು, ನ್ಯಾಯಾನಾ'' ಎಂದು ಪ್ರಶ್ನಿಸಿದರು.

''ತಾಕತ್ತಿದ್ದರೆ ಎಲ್ಲರನ್ನು ಬಂಧಿಸಿ ನೋಡೋಣ. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ. ಕಾಂಗ್ರೆಸ್ ಪಕ್ಷ ಸೋಲಿನ ಭಯದಿಂದ ಹೀಗೆ ಮಾಡುತ್ತಿದೆ. ಬೇರೊಂದು ಸಮುದಾಯದ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ'' ಎಂದು‌ ಆರೋಪಿಸಿದರು.

ಹರಿಪ್ರಸಾದ್​ ಅವರ ಹೇಳಿಕೆ ಖಂಡಿಸಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ''ಹಿಂದೂಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ರಾಜಕೀಯ ನಾಯಕರೊಬ್ಬರು ಹೀಗೆ ಹೇಳುತ್ತಾರಂದರೆ ಸರ್ಕಾರ ಏನು ಮಾಡುತ್ತಿದೆ'' ಎಂದು ಇದೇ ವೇಳೆ ಪ್ರಶ್ನಿಸಿದರು.

ಹು-ಧಾ ಪೊಲೀಸ್ ಕಮೀಷನರ್ ಪ್ರತಿಕ್ರಿಯೆ:ಪೊಲೀಸ್ ಠಾಣೆ ಮುತ್ತಿಗೆ ಪ್ರಕರಣಕ್ಕೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಮಾತನಾಡಿ, ''ಶಹರ್​ ಠಾಣೆ ಮುತ್ತಿಗೆ ಹಾಕಲು ಯತ್ನಿಸಿದ 150 ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಅವರ ಬೇಡಿಕೆಯನ್ನು ಕಾನೂನು ಬದ್ಧವಾಗಿ ಪರಿಶೀಲಿಸುತ್ತೇವೆ. ಪೊಲೀಸ್ ಇನಸ್ಪೆಕ್ಟರ್​ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ನಮ್ಮ ಇಲಾಖೆಯದ್ದೆ ನಿಯಮಗಳಿವೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಬಿಜೆಪಿಯವರಿಗೆ ಕೆಲಸವಿಲ್ಲದೆ, ದುರುದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪ

Last Updated : Jan 3, 2024, 5:52 PM IST

ABOUT THE AUTHOR

...view details