ಕರ್ನಾಟಕ

karnataka

ETV Bharat / state

ಉಕ್ರೇನ್‌ನಿಂದ ಹುಬ್ಬಳ್ಳಿಗೆ ಆಗಮಿಸಿದ ವಿದ್ಯಾರ್ಥಿನಿ ಕೊರಳಿಗೆ ಹಾರ ಹಾಕಿ, ಸಿಹಿ ತಿನ್ನಿಸಿ ಬರಮಾಡಿಕೊಂಡ ಸಿಎಂ - CM welcomed of a student who one arriving from Ukraine

ಉಕ್ರೇನ್​ನಿಂದ ಹುಬ್ಬಳ್ಳಿಗೆ ಆಗಮಿಸಿದ ಚೈತ್ರಾ ಸಂಶಿ ಎಂಬ ವಿದ್ಯಾರ್ಥಿನಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾರ ಹಾಕಿ, ಸಿಹಿ ತಿನ್ನಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಮಗಳನ್ನು ನೋಡಿದ ಪೋಷಕರ ಕಣ್ಣಂಚಲಿ ನೀರು ಜಿನುಗಿತು. ಮಗಳನ್ನು ತಬ್ಬಿ ತಾಯಿ ಮುದ್ದಾಡಿದರು.‌

bommai
ಬೊಮ್ಮಾಯಿ

By

Published : Mar 6, 2022, 9:42 AM IST

Updated : Mar 6, 2022, 11:10 AM IST

ಹುಬ್ಬಳ್ಳಿ: ಉಕ್ರೇನ್​ನಲ್ಲಿ ಸಿಲುಕಿದ್ದ ಧಾರವಾಡ ಜಿಲ್ಲೆಯ‌ ಯರಗುಪ್ಪಿ ಗ್ರಾಮದ ಚೈತ್ರಾ ಸಂಶಿ ಎಂಬ ವಿದ್ಯಾರ್ಥಿನಿ ಇಂದು ಹುಬ್ಬಳ್ಳಿ ವಿಮಾ‌ನ‌ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಹೂಗುಚ್ಛ ನೀಡಿ, ಹಾರ ಹಾಕಿರುವ ಸಿಎಂ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಸಿಎಂ, ಬಹಳಷ್ಟು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಇಂದು ತವರಿಗೆ ಮರಳಿರುವ ಚೈತ್ರಾ ಉಕ್ರೇನ್​ನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದಾಳೆ. ಬಂಕರ್​ನಲ್ಲಿ ಸಿಲುಕಿದ್ದ ಈ ವಿದ್ಯಾರ್ಥಿನಿ, ತಾನು ಇದ್ದ ಸ್ಥಳದಿಂದ 4-5 ಕಿ.ಮೀ ರಸ್ತೆಯ ಮೂಲಕ ನಡೆದುಕೊಂಡು ಬಂದು ರಾಯಭಾರಿ ಕಚೇರಿ ಅಧಿಕಾರಿಗಳ ಸಹಾಯ ಪಡೆದು, ದೇವರ ಆಶೀರ್ವಾದದಿಂದ ಇಲ್ಲಿಗೆ ಬಂದಿದ್ದಾಳೆ. ಚೈತ್ರಾ ಕುಟುಂಬಸ್ಥರು ಭಯಗೊಂಡಿದ್ದರು. ಈ ಸಮಯದಲ್ಲಿ ಜಿಲ್ಲಾಡಳಿತ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತ್ತು ಎಂದರು.


200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇನ್ನೂ ಅಲ್ಲಿಯೇ ಇದ್ದಾರೆ. ರಾಯಭಾರಿ ಕಚೇರಿ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಈ ಕುರಿತು ಮೋದಿಯವರೇ ಸ್ವಯಂ ಮಾನಿಟರ್ ಮಾಡ್ತಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ. ಗಡಿಯಲ್ಲಿರುವ 4-5 ರಾಷ್ಟ್ರಗಳ ಜೊತೆ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೇ, ನವೀನ್ ಮೃತ ದೇಹವನ್ನ ಸಹ ಕರೆತರುವ ಕಾರ್ಯ ನಡೆಯುತ್ತಿದೆ. ಯುದ್ಧದ ಸ್ಥಿತಿಯನ್ನ ನೋಡಿಕೊಂಡು ಮೃತದೇಹವನ್ನು ತರುವ ಕೆಲಸ ಆಗಲಿದೆ. ಆದಷ್ಟು ಬೇಗ ಮೃತದೇಹ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.


ಪೋಷಕರ ಕಣ್ಣಂಚಲಿ ನೀರು: ಚೈತ್ರಾ ಸಂಶಿ ತವರಿಗೆ ಮರಳುತ್ತಿದಂತೆ ಪೋಷಕರ ಮುಖದಲ್ಲಿ ಮಂದಹಾಸ ಮೂಡಿತು. ಮಗಳನ್ನು ನೋಡಿದ ಅವರ ಕಣ್ಣಂಚಲಿ ನೀರು ಜಿನುಗಿತು. ಸಿಎಂ ಎದುರೇ ಚೈತ್ರಾಳನ್ನು ಅವರ ತಾಯಿ ತಬ್ಬಿ ಮುದ್ದಾಡಿದರು.‌

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಚೈತ್ರಾ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ತಂಬಾ ಕಠಿಣ ಪರಿಸ್ಥಿತಿಯಿತ್ತು. ನಮ್ಮ ದೇಶದ ರಾಯಭಾರಿ ಕಚೇರಿ ಸಾಕಷ್ಟು ಸಹಾಯ ಮಾಡಿದೆ. ಏಳೆಂಟು ದಿನಗಳ ಕಾಲ ಬಂಕರ್​ನಲ್ಲೇ ಕಾಲ‌ ಕಳೆದಿದ್ದೇವೆ. ದಿನಕ್ಕೆ ಒಂದೊತ್ತು ಊಟ ಮಾಡುತ್ತಿದ್ದೆವು ಎಂದು ವಿವರಿಸಿದರು.

Last Updated : Mar 6, 2022, 11:10 AM IST

ABOUT THE AUTHOR

...view details