ಧಾರವಾಡ : ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಪರೋಕ್ಷ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಜನರಲ್ ಸ್ಟೇಟ್ಮೆಂಟ್ಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಅವರು ನನ್ನ ಹೆಸರು ಹೇಳಿದ್ರಾ ?. ನನ್ನ ಹೆಸರನ್ನು ಎಲ್ಲಿಯಾದರೂ ಪ್ರಸ್ತಾಪ ಮಾಡಿದ್ದಾರಾ?. ಸಾಮಾನ್ಯ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯತೆ ಇಲ್ಲ ಎಂದು ಹೇಳಿದರು.
ಮಹದಾಯಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಕೇಂದ್ರ ಸರ್ಕಾರವು ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆ ಕ್ಲಿಯರೆನ್ಸ್ ನೀಡಬೇಕು. ಕ್ಲಿಯರೆನ್ಸ್ ನೀಡಿದ ಕೂಡಲೇ ನಾವು ಟೆಂಡರ್ ಕರೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ :ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಕೆಲವರು ಪಂಚೆ ಹಾಕಿಕೊಂಡು ಹೂಬ್ಲೆಟ್ ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲ ಎಂದು ಟೀಕಿಸಿದ್ದರು.