ಧಾರವಾಡ: ಈ ದೇಶದ ಸಂಪತ್ತು ಉತ್ಪಾದನೆ ಮಾಡುವ ಕಾಯಕ ಜೀವಿಗಳು. ಅದನ್ನೇ ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಅಂತಾ ಕರೆದರು. ಉತ್ಪಾದನೆ ಪಕ್ರಿಯೆಯಲ್ಲಿ ಇರುವ ಕಾಯಕ ಜೀವಿಗಳು ಮಾಡಿದ ಉತ್ಪಾದನೆಯನ್ನು ಎಲ್ಲರಿಗೂ ಹಂಚುವುದು ದಾಸೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಕಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷಚೇತನರಿಗೆ ವಾಹನ ವಿತರಣೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಮಾಜದಲ್ಲಿಂದು ಶೇ. 90ರಷ್ಟು ಸಂಪತ್ತು ಕೇವಲ ಶೇ. 10ರಷ್ಟು ಜನರಲ್ಲಿ ಕೇಂದ್ರೀಕೃತವಾಗಿದೆ. ಇದರಿಂದಾಗಿಯೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಈ ಅಸಮಾನತೆ ತೊಲಗಿಸುವ ಬಗ್ಗೆ ಅಂಬೇಡ್ಕರ್ ಹೇಳಿದ್ದರು. ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿ, ಶಾಂತಿ ಇರಲು ಸಾಧ್ಯವಿಲ್ಲ. ಅಸಮಾನತೆಯಿಂದ ಬಳಲುವವರು ಮುಖ್ಯವಾಹಿನಿಗೆ ಬರಬೇಕು. ಇಲ್ಲದೇ ಹೋದರೆ ಅಸಮಾನತೆ ಮುಂದುವರೆಯುತ್ತದೆ ಎಂದರು.
ಅಂಬೇಡ್ಕರ್ ಅವರು 1949ರ ನ. 25ರಂದು ಭಾಷಣ ಮಾಡಿದ್ದರು. 1950ರ ಜನವರಿ 26ರಿಂದ ವೈವಿಧ್ಯತೆಯ ಸಮಾಜಕ್ಕೆ ಕಾಲಿಡುತ್ತೇವೆ ಎಂದು ಹೇಳಿದ್ದರು. ಇಂದು ನಮಗೆ ಸ್ವಾತಂತ್ರ್ಯ ಬಂದಿದೆ. ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಅದು ಯಶಸ್ವಿಯಾಗಲು ಅಸಮಾನತೆಯನ್ನು ತೊಡೆದು ಹಾಕಲೇಬೇಕು. ಆದ್ರೆ ಸ್ವಾತಂತ್ರ್ಯ ಬಂದ ಮೇಲೂ ಅಸಮಾನತೆಯಿಂದ ಜನರು ನರಳುತ್ತಿದ್ದಾರೆ. ಈ ರಾಜಕೀಯ, ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕು ಎಂದು ತಿಳಿಸಿದರು.