ಹುಬ್ಬಳ್ಳಿ:"ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯ ಕೇಳ್ತಿದ್ದೀವಿ. ಅವರೂ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಶೆಟ್ಟರ್ ನಿವಾಸದಲ್ಲಿಂದು ಮಾತನಾಡಿದ ಅವರು, "ನಮ್ಮ ಶಾಸಕರು, ಕಾರ್ಯಕರ್ತರು ಹಾಗೂ ಈ ಹಿಂದೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಯಾರಿಗೆ ಟಿಕೆಟ್ ಕೊಡಬೇಕು ಎಂದು ಹೇಳ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ" ಎಂದರು.
ಮುಂದುವರಿದು ಮಾತನಾಡಿದ ಸಿಎಂ, "ಪ್ರತಿ ಜಿಲ್ಲೆಯಲ್ಲೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದೇವೆ. ಅವರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅಭಿಪ್ರಾಯ ಸಂಗ್ರಹಿಸಿ ಮೂವರ ಹೆಸರುಗಳನ್ನು ಪ್ಯಾನೆಲ್ಗೆ ಕೊಡಿ ಅಂತ ಹೇಳಿದ್ದೇವೆ. ಅವರಲ್ಲಿ ಯಾರು ಸೂಕ್ತ ಆಗ್ತಾರೋ, ಅಂಥವರಿಗೆ ಟಿಕೆಟ್ ಕೊಡುತ್ತೇವೆ" ಎಂದು ಹೇಳಿದರು.
ಅಲ್ಪಸಂಖ್ಯಾತರು ಭಾರತೀಯ ನಾಗರಿಕರಲ್ಲವೇ?: ಅಲ್ಪಸಂಖ್ಯಾತ ಸಮುದಾಯಕ್ಕೆ ಮೂರು ಟಿಕೆಟ್ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, "ನಾವು ಈ ಹಿಂದೆ ಕೂಡ ಎರಡು ಟಿಕೆಟ್ ಕೊಟ್ಟಿದ್ದೆವು. ಈ ಬಾರಿಯೂ ಕೊಡ್ತೇವೆ. ಬಿಜೆಪಿಯವರು ಏನ್ ಮಾಡ್ತಾರೆ? ಅವರು ಅಲ್ಪಸಂಖ್ಯಾತರ ವೋಟ್ ಬೇಡ ಅಂತಾರೆ. ಅಲ್ಪಸಂಖ್ಯಾತರು ಭಾರತೀಯ ನಾಗರಿಕರಲ್ಲವೇ? ಇದಕ್ಕೆ ಅವರು ಉತ್ತರ ಹೇಳುತ್ತಾರಾ?. ಯತ್ನಾಳ್ ಗಡ್ಡ ಬಿಟ್ಟವರು, ಬುರ್ಖಾ ಹಾಕಿದವರು ಬರಬೇಡಿ ಅಂತಾರೆ, ಅವರನ್ನು ನಾನು ಭೇಟಿ ಮಾಡಲ್ಲ ಅಂತಾರೆ. ಅವರದು ಬಹುತ್ವದ ಪಕ್ಷನಾ? ನಮ್ಮ ದೇಶ ಬಹುತ್ವದ ಸಂಸ್ಕೃತಿ ಇರುವ ದೇಶ" ಎಂದರು.