ಹುಬ್ಬಳ್ಳಿ: ವಂಟಮೂರಿ ಘಟನೆ ಸಂಬಂಧ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹೆಣ್ಣು ಮಗಳ ಮೇಲೆ ದೌರ್ಜನ್ಯ ಆಗಿರುವುದು ನಿಜ. ಕಾನೂನು ಪ್ರಕಾರ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಗೃಹ ಸಚಿವರು ಆಸ್ಪತ್ರೆಗೆ ಹೋಗಿ, ಸಂತ್ರಸ್ತೆಯನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಂಟಮೂರಿ ಘಟನೆ ಸಂಬಂಧ ಆರೋಪಿಗಳನ್ನು ತಕ್ಷಣ ಅರೆಸ್ಟ್ ಮಾಡಲಾಗಿದೆ. ಆದರೆ ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡಲು ಹೊರಟ್ಟಿದ್ದಾರೆ. ನ್ಯಾಷನಲ್ ಕ್ರೈಂ ಬ್ಯೂರೋ ತೆಗೆದು ನೋಡಿ ಅವರ ಅವಧಿಯಲ್ಲಿ ಎಷ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿಯುತ್ತದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ 9 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಸಂಬಂಧ ಶಿಕ್ಷೆಯಾಗಿದೆ. ಇದಕ್ಕೆ ನಡ್ಡಾ ಏನು ಹೇಳುತ್ತಾರೆ?. ಹೆಣ್ಣು ಮಗಳ ಮೇಲೆ ದೌರ್ಜನ್ಯ ಆಗಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದರು.
ಮೈಸೂರ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ತೀರ್ಮಾನ ಮಾಡಿಲ್ಲ. ಅದು ಅವರವರ ಅಭಿಪ್ರಾಯ ಎಂದರು. ಸಂಸತ್ನಲ್ಲಿ ಭದ್ರತಾ ಲೋಪವಾಗಿರುವ ಕುರಿತು ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ಸಂಸತ್ನಲ್ಲಿ ಭದ್ರತಾ ಲೋಪ ಆಗಿರುವುದು ನಿಜನಾ, ಸುಳ್ಳಾ?. ಲೋಪ ಆಗಿದೆ ಅದನ್ನು ಕೇಳಿದರೆ ತಪ್ಪಾ? ಎಂದು ಹೇಳಿದರು.