ಹುಬ್ಬಳ್ಳಿ: ಸರ್ಕಾರ ರಚನೆಯಾಗಿ ಕೇವಲ ಎರಡು ತಿಂಗಳಾಗಿದೆ. ಸಣ್ಣ-ಪುಟ್ಟ ಅಸಮಾಧಾನಗಳು ಇರಬಹುದು. ಆದರೆ, ದೂರು ನೀಡುವಷ್ಟು ಅಸಮಾಧಾನ ಕಾಂಗ್ರೆಸ್ ಪಕ್ಕದಲ್ಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾವೇರಿಯಲ್ಲಿ ಇಂದು (ಮಂಗಳವಾರ) ಪ್ರಗತಿ ಪರಿಶೀಲನೆ ನಡೆಯುತ್ತಿದ್ದು, ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ಈ ವೇಳೆ ಶಾಸಕರ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
''ಸಚಿವರು ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು 30 ಶಾಸಕರು ಪತ್ರ ಬರೆಯುವ ಮೂಲಕ ಅಳಲು ತೋಡಿಕೊಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸಚಿವರ ವಿರುದ್ಧ ಶಾಸಕರು ನೀಡಿದ ದೂರಿನ ವಿಚಾರ ಕೂಡ ನನ್ನ ಗಮನಕ್ಕೆ ಬಂದಿಲ್ಲ'' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
''ಶಾಸಕರು, ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ವಾರವೇ ಸಭೆ ಕರೆಯಬೇಕಿತ್ತು. ಆದರೆ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಮತ್ತು ಅವರೇ ಸಭೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸಭೆ ನಡೆದಿಲ್ಲ. ಗುರುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ ಎಲ್ಲದರ ಬಗ್ಗೆ ಚರ್ಚೆ ನಡೆಸಲಾಗುವುದು'' ಎಂದರು.
ಸರ್ಕಾರ ಅತಂತ್ರಗೊಳಿಸುವ ನಿಟ್ಟಿನಲ್ಲಿ ಸಿಂಗಾಪುರದಲ್ಲಿ ಪಿತೂರಿ ನಡಿಯುತ್ತಿದೆ ಎಂಬ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ''ಈ ಬಗ್ಗೆಯೂ ತಮಗೆ ಮಾಹಿತಿ ಇಲ್ಲ. ಈ ಪ್ರಶ್ನೆಯನ್ನು ಡಿ ಕೆ ಶಿವಕುಮಾರ್ ಅವರನ್ನೇ ಕೇಳಿ'' ಎಂದು ಹೇಳುವ ಮೂಲಕ ಆ ವಿಚಾರವನ್ನು ಮೊಟಕುಗೊಳಿಸಿದರು.