ಹುಬ್ಬಳ್ಳಿ: ಉಣಕಲ್ ಸಿದ್ದಪ್ಪಜ್ಜನವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದಪ್ಪಜ್ಜನವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಚಿಕ್ಕಂದಿನಿಂದಲೂ ಉಣಕಲ್ ಸಿದ್ದಪ್ಪಜ್ಜನ ದೇವಸ್ಥಾನಕ್ಕೆ ಬರುತ್ತಿದ್ದೆ. ಈಗ ಬಜೆಟ್ ತಯಾರಿ ನಡೆಯುತ್ತಿದ್ದು, ಈ ವಿಚಾರವಾಗಿ ಎಲ್ಲಾ ಇಲಾಖೆಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಅತ್ಯುತ್ತಮ ಬಜೆಟ್ ನೀಡಲಾಗುವುದು. ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆ ನಿರೀಕ್ಷಿಸಿ ಎಂದರು.
ಫೆಬ್ರವರಿ 17ರಂದು ಬಜೆಟ್ ಸಾಧ್ಯತೆ: 2023ರ ಬಜೆಟ್ ಅಧಿವೇಶನವು ಫೆ.17ರಂದು ನಡೆಯುವ ಸಾಧ್ಯತೆ ಇದ್ದು, ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಮತ್ತು ಹೆಣ್ಣುಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸಲಿದೆ. ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವಂತಹ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಪಂಚಪೀಠಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದರು.