ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ.
ಹುಬ್ಬಳ್ಳಿಯಲ್ಲಿಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, "ಇವತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಒಳ್ಳೆಯ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ. ಪ್ರಣಾಳಿಕೆಗಾಗಿ 224 ಕ್ಷೇತ್ರದ ಜನರ, ಪರಿಣಿತರ ಅಭಿಪ್ರಾಯ ಪಡೆಯಲಾಗಿದೆ. ಇದು ಜನಪರ, ಪ್ರಜಾ ಪ್ರಣಾಳಿಕೆ ಆಗಿರಲಿದೆ" ಎಂದರು. "ಜನರಿಗೆ ಏನೆಲ್ಲ ಒಳ್ಳೆಯದನ್ನು ಮಾಡಲು ಸಾಧ್ಯ, ಜನಕಲ್ಯಾಣಕ್ಕಾಗಿ ಏನೇನು ಮಾಡಬೇಕೋ ಅದನ್ನು ಮಾಡುವ ಪ್ರಯತ್ನ ಮಾಡ್ತಿದ್ದೇವೆ" ಎಂದು ತಿಳಿಸಿದರು.