ಹುಬ್ಬಳ್ಳಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆ ಸಮೀಸುತ್ತಿದ್ದಂತೆ ವಿಧಾನಸೌಧ ಬಿಟ್ಟು ಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಜ್ಯ ಸಂಚಾರ ಮಾಡುತ್ತಿದ್ದಾರೆ. ಅವರು ಮಾಡಿದ ಸಾಧನೆ ಶೂನ್ಯವಾಗಿದೆ. ಹೀಗಾಗಿ ಅವರು ಮಾಡಿರುವ ಸಾಧನೆಯ ಕುರಿತಾಗಿ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಒತ್ತಾಯಿಸಿದರು.
ಬಿಜೆಪಿ ಹೈಕಮಾಂಡ್ನಿಂದ 150 ಟಾರ್ಗೆಟ್: ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಚುನಾವಣೆ ಯುದ್ದದ ಕಾರ್ಮೋಡಗಳಿವೆ. ಈ ವೇಳೆ ಆಡಳಿತ ಸೂತ್ರ ಹಿಡಿದಿರುವ ರಾಜ್ಯದ ಮುಖ್ಯಮಂತ್ರಿಗಳು, ಆ ಪಕ್ಷದ ಮುಖಂಡರುಗಳು ವಿಧಾನಸೌಧ ಬಿಟ್ಟು ಜನಸಂಕಲ್ಪ ಯಾತ್ರೆ ಮೂಲಕ ರಾಜ್ಯ ತಿರುಗುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ 150 ಟಾರ್ಗೆಟ್ ಕೊಟ್ಟಿದೆ ಎಂದು ಹುಮ್ಮಸ್ಸಿನಿಂದ ಸಿಎಂ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡುತ್ತಿದ್ದಾರೆ. ಬೊಮ್ಮಾಯಿ ಮಾಡಿದ ಸಾಧನೆ ಎಂದರೇ ಅದು, ಎಲ್ಲ ಇಲಾಖೆಯಲ್ಲಿ 40% ಭ್ರಷ್ಟಾಚಾರ. 540 ಸಬ್ಇನ್ಸ್ಪೆಕ್ಟರ್ ನೇಮಕಾತಿ ಅವ್ಯವಹಾರ ಮಾಡಿ ಎಜಿಡಿಪಿ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಿಸಿದ್ದಾರೆ. ಚುನಾವಣೆ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ವಿರೋಧಿಯಾಗಿರುವ ಮತದಾರರ ಹೆಸರನ್ನು ಡಿಲಿಟ್ ಮಾಡಿಸಿದೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಉಗ್ರಪ್ಪ: ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆ. ಆದ್ರೆ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬರುವ ಮುಂಚೆ 1 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಜೊತೆಗೆ ಬೆಲೆ ಕಡಿಮೆ ಮಾಡುವ ಭರವಸೆ ಕೊಟ್ಟಿದ್ದೀರಿ. ಆದರೆ ಇದೀಗ ನೀವು ಮಾಡಿದ್ದು ಏನೂ?. ಇದೀಗ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೆ ಏರಿವೆ. ಈ ಸರ್ಕಾರದಲ್ಲಿ ಹೊಸದಾಗಿ ನೀರಾವರಿ ಯೋಜನೆ ಮಾಡಿಲ್ಲ. ಸರ್ಕಾರ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿವೆ. ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿವೆ. ದೇಶದಲ್ಲಿ ಬಡತನ ಕಡಿಮೆ ಆಗಿಲ್ಲ. ಈ ಹಿಂದೆ ಹಸಿದವರ ಸಂಖ್ಯೆ 65 ಇದ್ದದ್ದು, ಇದೀಗ 107ನೇ ಸ್ಥಾನಕ್ಕೆ ಏರಿದೆ. ಇದೇ ಈ ಸರ್ಕಾರದ ಸಾಧನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.