ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಜನರನ್ನು ನರಕದಲ್ಲಿ ಇಟ್ಟಿದ್ದಕ್ಕೆ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಬೇಜಾವ್ದಾರಿ ವಿರೋಧ ಪಕ್ಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು. ಇದೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹಾಗು ಬಿಹಾರ ಸಿಎಂ ನಿತೇಶ್ ಕುಮಾರ್ ವಿರುದ್ಧ ಟೀಕಾ ಸಮರ ನಡೆಸಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸುರ್ಜೇವಾಲಾಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಮೊದಲು ಕಾಂಗ್ರೆಸ್ ಒಳಜಗಳ ಸರಿ ಮಾಡಲಿ. ಆ ಮೇಲೆ ಕರ್ನಾಟಕದ ಬಗ್ಗೆ ಮಾತಾಡಲಿ ಎಂದರು.
ಮುಂದುವರೆದು, ಸುರ್ಜೇವಾಲಾ ಹೇಳಿಕೆಗೆ, ಜನರಿಗೆ ಅಸುರ ಯಾರು, ದೇವತೆ ಯಾರು ಎಂದು ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಇರುವ ಅಸುರರ ಲಿಸ್ಟ್ ಬಹಳ ದೊಡ್ಡದು. 70 ವರ್ಷ ಆಡಳಿತ ಮಾಡಿದ ಪಕ್ಷವನ್ನು ಜನ ಕಿತ್ತೊಗೆದಿದ್ದಾರೆ. ಕಾಂಗ್ರೆಸ್ ಚುನಾವಣೆಗೋಸ್ಕರ ಜನರನ್ನು ಮರಳು ಮಾಡುತ್ತಿವೆ. ಆದರೆ ಅವರಿಗೂ ನಮಗೂ ಬಹಳ ವ್ಯತ್ಯಾಸ ಇದೆ. ನಮ್ಮ ನಕಲು ಅವರು ಮಾಡಿದ್ದಾರೆ, ನಾವು ಮೊದಲೇ ಗೃಹಿಣಿ ಶಕ್ತಿ ಯೋಜನೆ ತಿಳಿಸಿದ್ದೆವು. ನಂತರ ಕಾಂಗ್ರೆಸ್ ಪಕ್ಷದವರು ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆ ತಂದಿದ್ದಾರೆ. ಸುರ್ಜೇವಾಲಾಗೆ ಸ್ವಲ್ಪ ನೆನೆಪಿನ ಶಕ್ತಿ ಕಡಿಮೆ ಇದೆ. ನಾವು ಯಾವ ಯೋಜನೆಯನ್ನು ಯಾತಕ್ಕಾಗಿ ತಂದಿದ್ದೇವೆ, ಅದಕ್ಕಾಗಿ ಎಷ್ಟು ಹಣ ಯಾಕೆ ಯಾರಿಗೆ ನೀಡುತ್ತೇವೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು.