ಹುಬ್ಬಳ್ಳಿ: ಮುಖ್ಯಮಂತ್ರಿಯಾಗಿರುವ ನಾನು ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ತೆಗೆದುಕೊಳ್ಳುವ ನಿರ್ಣಯಗಳ ಹಿಂದೆ ಬಿವಿಬಿ ಕಾಲೇಜಿನಲ್ಲಿ ಕಲಿತ ವಿದ್ಯೆ ಪ್ರೇರಣೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ವಿದ್ಯಾನಗರದ ಬಿ.ವಿ.ಭೂಮರಡ್ಡಿ ಇಂಜಿನಿಯರ್ ಕಾಲೇಜಿನಲ್ಲಿ ಕೆಎಲ್‍ಇ ಟೆಕ್‍ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಸೈನ್ಸ್ ಅರ್ಥ ಮಾಡಿಕೊಂಡು ಜನರಿಗೆ ಉಪಯೋಗ ಮಾಡುವ ಕೆಲಸ ಆಗಬೇಕು. ಸೈನ್ಸ್ ದುಷ್ಟರ ಕೈಗೆ ಹೋಗಬಾರದು. ಆ ನಿಟ್ಟಿನಲ್ಲಿ ನಡೆಯಬೇಕು. ಕಾಯಕವೇ ಕೈಲಾಸ, ಕರ್ತವ್ಯ ಬೇರೆ ಕಾಯಕವೇ ಬೇರೆ. ಕರ್ತವ್ಯದಿಂದ ಬಂದ ಉತ್ಪಾದನೆ ಜನಕಲ್ಯಾಣಕ್ಕೆ ಉಪಯೋಗ ಮಾಡುವುದು ಕಾಯಕ. ಆ ನಿಟ್ಟಿನಲ್ಲಿ ಸಿಎಂ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಆತ್ಮವಿಶ್ವಾಸ ಇದೆ. ಮನಸ್ಸು ವಿಚಾರ, ಸ್ವಚ್ಛವಾಗಿದ್ದರೆ, ಯಶಸ್ವಿಯಾಗುತ್ತೇವೆ. ನಿರುದ್ಯೋಗ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಆರೋಗ್ಯವಂತ ಸಮಾಜ ನಿರ್ಮಾಣ ಆಗಿಲ್ಲ. ಈ ಅರಿವು ಮೂಡಿಸುವಲ್ಲಿ ನಾವು ಕೆಲಸ ಮಾಡಬೇಕು. ಜನರ ಒಡನಾಟ ತುಂಬಾ ಮಹತ್ವ, ಸಮಗ್ರ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ತುಂಬಾ ಮುಖ್ಯ. ಸರಿಯಾದ ವ್ಯಕ್ತಿತ್ವ ವಿಕಸನ ಇದ್ದರೆ ಯುವಕರು ಸಾಧನೆ ಮಾಡಲಿದ್ದಾರೆ ಎಂದು ಹೇಳಿದರು.
BVB ಕಾಲೇಜಿನ ದಿನಗಳನ್ನು ನೆನೆದ ಸಿಎಂ ಬಸಣ್ಣ ತವರು ಮನೆಯಿಂದ ಗಂಡ ಮನೆಗೆ :
ಇದೇ ಕಾಲೇಜಿನ ಹಳೇ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಸಿಎಂ ಬಸವರಾಜ ಅವರು ತಮ್ಮ ಹಿಂದಿನ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡು ಕೆಲಹೊತ್ತು ಭಾವುಕರಾದರು. ಮಾತುಗಳು ಬರ್ತಾ ಇಲ್ಲ. ಎಲ್ಲ ರಂಗದಲ್ಲಿ ಮಾತನಾಡಿದ್ದೇನೆ. ನನ್ನ ಸರಸ್ವತಿ ದೇಗುಲದಲ್ಲಿ ಮಾತನಾಡುವುದು ಕಷ್ಟ. ಎಲ್ಲ ನೆನಪು ಒಟ್ಟಿಗೆ ಬಂದಿವೆ. ಜ್ಞಾನ ಕೊಟ್ಟಿದೆ. ಧೋತ್ರದ ಸರ್ ಅತ್ಯಂತ ಹಿರಿಯರು. ಎಲ್ಲ ನೆನಪುಗಳು ಹಾಗೇ ಇವೆ. ಅಚ್ಚಳಿಯಾಗಿ ಉಳಿದಿದೆ. ಇದೆಲ್ಲಾ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಅನುಭವ ಆಗಿದೆ ಎಂದು ಕಾಲೇಜಿನ ದಿನಗಳನ್ನು ನೆನೆಪಿಸಿಕೊಂಡರು.
ನನ್ನ ಎದೆ ತುಂಬಿದೆ. ರಾಜಕಾರಣಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ, ದೈವ ಇಚ್ಛೆ ವಿದ್ಯೆಯನ್ನು ನಾಡಿನ ಆರುವರೆ ಕೋಟಿ ಜನರ ಶ್ರೇಯೋಭಿವೃದ್ದಿಗೆ ಈ ಕಾಲೇಜು ವಿದ್ಯೆಯ ದಾರೆ ಎರೆದಿದೆ ಎಂದು ಹೊಗಳಿದರು.
ಕರ್ನಾಟಕದಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಷ್ಟು ಅಡ್ವಾನ್ಸ್ಡ್ ನೋಡಿಲ್ಲ ಎಂದ ಅವರು ತಮ್ಮ ಕಾಲೇಜಿನ ಅಭೂತಪೂರ್ವ ಸಾಧನೆಯನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಕೆಎಲ್‍ಇ ಸಂಸ್ಥೆ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು.
ಉಸ್ತವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಾಲೇಜಿನ ಹಿಂದಿನ ವಿದ್ಯಾರ್ಥಿಗಳು, ಕೆಎಲ್ ಇ ಸಂಸ್ಥೆಯ ಉಪಕುಲಪತಿಗಳಾದ ಪ್ರಭಾಕರ್ ಕೋರೆ, ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಕೆಎಲ್‍ಇ ತಾಂತ್ರಿಕ ಉಪಕುಲಪತಿಗಳಾದ ಡಾ.ಅಶೋಕ ಶೆಟ್ಟರ್ ಸೇರಿದಂತೆ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.