ಹುಬ್ಬಳ್ಳಿ: ಕ್ಯಾನ್ಸರ್ ಎನ್ನುವುದು ದೈಹಿಕವಾಗಿರುವ ಸವಾಲನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುವ ಸ್ಥಿತಿ. ಕ್ಯಾನ್ಸರ್ ಎಂದ ತಕ್ಷಣ ಮನುಷ್ಯ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾನೆ. ಇದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಯಾರಿಗೆ ಮಾನಸಿಕ ಶಕ್ತಿ ಧೃಡವಾಗಿವೆ, ದೈವಿಕ ಶಕ್ತಿಯಿದೆ ಅವರಿಗೆ ಕ್ಯಾನ್ಸರ್ ಗೆಲುವ ಶಕ್ತಿಯಿದೆ. ನಾನು ಬಹಳಷ್ಟು ಹತ್ತಿರದಿಂದ ಕ್ಯಾನ್ಸರ್ ನೋಡಿದ್ದೇನೆ. ನಮ್ಮ ತಾಯಿಗೆ ಕ್ಯಾನ್ಸರ್ ಇತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡಾ. ಆರ್.ಬಿ ಪಾಟೀಲ್ ಕಂಚಿನ ಪುತ್ಥಳಿ ಹಾಗೂ ನೂತನ ಬ್ಲಾಕ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕ್ಯಾನ್ಸರ್ ಬಗ್ಗೆ ಯಾರೂ ಭಯಪಡಬೇಕಿಲ್ಲ. ಕ್ಯಾನ್ಸರ್ನೊಂದಿಗೆ ಜನ ಬದುಕಬೇಕಿದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು, ಮಾನವೀಯತೆಯಿಂದ, ತಾಳ್ಮೆಯಿಂದ, ಕರುಣೆಯಿಂದ ನಡೆದುಕೊಳ್ಳಬೇಕು. ಈ ಹಿಂದೆ ಹುಬ್ಬಳ್ಳಿಯಲ್ಲಿ ಒಳ್ಳೆಯದನ್ನು ಬಯಸುವ ನಿಟ್ಟಿನಲ್ಲಿ ಒಂದು ನಾಗರಿಕ ಸಮಾಜ ಹುಟ್ಟಿಕೊಂಡಿತ್ತು. ಆದರೆ, ಈಗ ಹುಬ್ಬಳ್ಳಿ ಬಹಳಷ್ಟು ಬೆಳೆದಿದೆ. ಆದರೆ ನಾಗರಿಕ ಸಮಾಜ ಮರೆಯಾಗಿದೆ. ಉತ್ತರ ಕರ್ನಾಟಕದ ರೈತರು, ಯುವಕರು ಹೆಚ್ಚು ಸಿಗರೇಟ್, ತಂಬಾಕು ಸೇವನೆ ಮತ್ತು ಆಹಾರ ಪದ್ದತಿಯಿಂದ ಕ್ಯಾನ್ಸರ್ ಹೆಚ್ಚಾಗಿದೆ ಎಂದರು.
ಸಂಶೋಧನಾ ಕೇಂದ್ರವಾಗಿ ಬೆಳೆಯಬೇಕು: ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಸಂಶೋಧನಾ ಕೇಂದ್ರವಾಗಿ ಮಾರ್ಪಾಡಾಗಬೇಕು. ಇದಕ್ಕೆ ಸರ್ಕಾರದ ಸಹಕಾರ ಇದ್ದೇ ಇದೆ. ಪದ್ಮಶ್ರೀ ಆರ್.ಬಿ. ಪಾಟೀಲ್ ಅವರು ಜನಸಾಮಾನ್ಯರಿಗೆ ಒಳ್ಳೆ ಚಿಕಿತ್ಸೆ ನೀಡುತ್ತಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಬಾಂಬೆ, ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇತ್ತು. ಆಗ ಹಲವರು ಸೇರಿ ಹುಬ್ಬಳ್ಳಿಯಲ್ಲೇ ಆಸ್ಪತ್ರೆ ತೆರೆದರು.