ಧಾರವಾಡ ಜೈಲಿನಲ್ಲಿ ಕೈದಿ ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ ಧಾರವಾಡ: ಕೈದಿ ಮತ್ತು ಜೈಲು ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿರುವ ಘಟನೆ ಧಾರವಾಡ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಘಟನೆಯಲ್ಲಿ ಜೈಲು ಸಿಬ್ಬಂದಿ ಮತ್ತು ಕೈದಿ ಇಬ್ಬರಿಗೂ ಗಾಯಗಳಾಗಿವೆ. ಮೋಹನ ಸಿದ್ದಪ್ಪ ಬಡಿಗೇರ ಗಾಯಗೊಂಡ ಜೈಲು ಸಿಬ್ಬಂದಿಯಾಗಿದ್ದು, ಪ್ರಶಾಂತ ಅಲಿಯಾಸ್ ಪಾಚು ಹಲ್ಲೆ ಮಾಡಿದ ಕೈದಿಯಾಗಿದ್ದಾನೆ. ಗಾಯಗೊಂಡ ಇಬ್ಬರನ್ನೂ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಅನೇಕ ದಿನಗಳಿಂದ ಧಾರವಾಡ ಕಾರಾಗೃಹದಲ್ಲಿದ್ದ ಪ್ರಶಾಂತ ಎಂಬ ಕೈದಿ ಬಾಚಣಿಕೆಯನ್ನೇ ಚಾಕೂವಿನಂತೆ ಮಾಡಿಕೊಂಡು ಜೈಲಿನ ಸಿಬ್ಬಂದಿಗೆ ಹೊಡೆದಿರುವ ಸಾಧ್ಯತೆಯಿದೆ. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೈದಿ ಮತ್ತು ಸಿಬ್ಬಂದಿಗೆ ಸ್ಕ್ಯಾನಿಂಗ್ ಮಾಡಿಸಲಾಗಿದ್ದು, ಈಗಾಗಲೇ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಮನೆಗಳ್ಳರಿಗೆ ಸಾಥ್ ಕೊಟ್ಟಿದ್ದ ಕಾನ್ಸ್ಟೇಬಲ್ ಅರೆಸ್ಟ್
ಈ ಹಿಂದೆಯೂ ನಡೆದಿದ್ದವು ಇಂತಹ ಘಟನೆಗಳು( ಹಿಂಡಲಗಾ):ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳಿಬ್ಬರು ಪರಸ್ಪರ ಹೊಡೆದಾಕೊಂಡಿರುವ ಘಟನೆ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು. ಗಾಯಗೊಂಡಿದ್ದ ಕೈದಿಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಗಲಾಟೆಯಲ್ಲಿ ಓರ್ವ ಕೈದಿ ಸ್ಕ್ರೂಡ್ರೈವರ್ನಿಂದ ಮತ್ತೊಬ್ಬ ಕೈದಿಗೆ ಐದು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ್ದ. ಶಂಕರ ಭಜಂತ್ರಿ ಕೊಲೆ ಮಾಡಲು ಯತ್ನಿಸಿದ್ದ ಕೈದಿ. ಮಂಡ್ಯ ಮೂಲದ ಸಾಯಿಕುಮಾರ್ ಗಾಯಗೊಂಡಿದ್ದ ವಿಚಾರಣಾಧೀನ ಕೈದಿ ಎಂದು ತಿಳಿದುಬಂದಿತ್ತು. ಘಟನೆಯಿಂದ ಬೆಳಗಾವಿ ಜಿಲ್ಲಾಸ್ಪತ್ರೆ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಶಿವಮೊಗ್ಗ ಜೈಲಿನಲ್ಲಿ ಕೈದಿಗಳ ನಡುವೆ ಗಲಾಟೆ:ಇನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹಳೆ ವೈಷಮ್ಯದ ಹಿನ್ನೆಲೆ ಕೈದಿಗಳ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಒಬ್ಬ ಗಾಯಗೊಂಡಿದ್ದ. ಸಲ್ಮಾನ್(24) ಗಾಯಗೊಂಡವರು ಎಂಬುದಾಗಿ ತಿಳಿದು ಬಂದಿತ್ತು. ಈತ ಅಂದು ಗಾಂಜಾ ಮಾರಾಟ ಕೇಸ್ನಲ್ಲಿ ಕಾರಾಗೃಹಕ್ಕೆ ಬಂದಿದ್ದ. ಈತನ ವಿರುದ್ದ ಹಳೆ ವೈಷಮ್ಯ ಕಾರಣ ಈಗಾಗಲೇ ಅರೆಸ್ಟ್ ಆಗಿದ್ದ ಸುಕ್ಕ ಕಲೀಂ ಹಾಗೂ ಗೌಸ್ ಎಂಬುವರು ಸಲ್ಮಾನ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು. ಇದರಿಂದ ಸಲ್ಮಾನ್ ಮೂಗಿಗೆ ಗಾಯವಾಗಿತ್ತು.
ತಕ್ಷಣ ಕಾರಾಗೃಹದ ಸಿಬ್ಬಂದಿ ಗಲಾಟೆ ಬಿಡಿಸಿದ್ದರು. ಈ ವೇಳೆಗಾಗಲೇ ಹಲ್ಲೆ ನಡೆಸಿದವರು ಸಲ್ಮಾನ್ ಕುಟುಂಬದವರಿಗೆ ಕರೆ ಮಾಡಿ ಆತನನ್ನು ಕೊಲೆ ಮಾಡುವುದಾಗಿ ತಿಳಿಸಿದ್ದರು. ಇದನ್ನು ತಿಳಿದ ಆತನ ಕುಟುಂಬಸ್ಥರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಕೆಲವರು ಕಾರಾಗೃಹದ ಮುಂದೆ ಹೋಗಿ ಗಲಾಟೆ ನಡೆಸಲು ಮುಂದಾಗಿದ್ದರು. ಅಷ್ಟರಲ್ಲಿ ತುಂಗಾನಗರ ಸಿಪಿಐ ದೀಪಕ್ ಕಾರಾಗೃಹದ ಬಳಿ ಗಲಾಟೆ ಮಾಡುವವರನ್ನು ವಶಕ್ಕೆ ಪಡೆದುಕೊಂಡಿದ್ದರು.