ಹುಬ್ಬಳ್ಳಿ: ಪೌರತ್ವ ಎಂಬುದು ರಾಷ್ಟ್ರೀಯ ವಿಷಯವಾಗಿದ್ದು, ಈ ಹೋರಾಟಕ್ಕೆ ಯಾವುದೇ ಜಾತಿ ಮೀಸಲಿಲ್ಲ. ಆದರೆ ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ವಸಮ್ಮತವಾಗಿ ತೀರ್ಮಾನಿಸಬೇಕು. ಈ ದೃಷ್ಟಿಯಿಂದ ಸರ್ವಪಕ್ಷಗಳ ಸಭೆ ಕರೆದು ಸಮಾಲೋಚಿಸಿ ವಿವಾದ ಬಗೆಹರಿಸಬೇಕೆಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಲಹೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಹಳಷ್ಟು ಬೆಳವಣಿಗೆಯಾಗುತ್ತಿದ್ದು, ಮನಸ್ಸಿಗೆ ಘಾಸಿ ಮಾಡುವಂತ ಘಟನೆಗಳು ನಡೆಯುತ್ತಿವೆ. ಮೋದಿ ಮತ್ತು ಅಮಿತ್ ಶಾ ಜಾತ್ಯಾತೀತವಾಗಿ ಜಾತಿ ಇಟ್ಟುಕೊಂಡು ಮಾಡಲಿಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಪೌರತ್ವ ತಿದ್ದುಪಜಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಕೇವಲ ಒಂದು ಜಾತಿ ಮೀಸಲಿಲ್ಲ. ಆದರೆ ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಬಡವರ ಮತ್ತು ಶ್ರಮಜೀವಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಹರಿಹಾಯ್ದರು.
'ಉದ್ದವ್ ಠಾಕ್ರೆ ಕ್ಷಮೆ ಕೇಳಬೇಕು'
ಗಡಿ ವಿವಾದ ಕುರಿತಂತೆ ಕಳೆದ 15 ದಿನಗಳಿಂದ ಉದ್ಧವ್ ಠಾಕ್ರೆ ಕಾನೂನು ಹೋರಾಟ ಮತ್ತು ರಾಜಕೀಯ ಮಾಡಲು ಇಬ್ಬರು ಸಚಿವರನ್ನು ನೇಮಿಸಿದ್ದಾರೆ. ಇದಕ್ಕೆ ತಂಡವನ್ನು ರೂಪಿಸಿ ಹೋರಾಟವನ್ನು ತೀವ್ರಗೊಳಿಸಿ ಎಂದು ಆದೇಶ ನೀಡಿದ್ದಾರೆ. ನಾಗಪುರದಲ್ಲಿ ಉದ್ಧವ್ ಠಾಕ್ರೆ ಬೆಳಗಾವಿ, ಕಾರವಾರ, ನಿಪ್ಪಣಿ ಬಗ್ಗೆ ಮಾತನಾಡಿ ಕರ್ನಾಟಕದ ಈ ಮೂರು ಪ್ರದೇಶಗಳು 'ಆಕ್ರಮಿತ' ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಅವರು ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಈ ಹಿಂದೆ ಮಹತ್ಮಾ ಗಾಂಧಿ, ಇಂದಿರಾ ಗಾಂಧಿ ಬೆಳಗಾವಿ ಕರ್ನಾಟಕ ರಾಜ್ಯದ್ದು ಎಂದು ತಿಳಿಸಿದ್ದಾರೆ. ಈಗ ಬೆಳಗಾವಿ ನಮ್ಮದು ಎಂದು ಹೇಳಿದ್ದು ಸರಿಯಲ್ಲ. ಹೀಗಾಗಿ ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.