ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ ದೇಶದ ಜನರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ, ಇಲ್ಲಿನ ನಾಗರಿಕರಿಗೂ, ರಾಷ್ಟ್ರೀಯ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಆದರೆೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಬುದ್ಧಿಜೀವಿಗಳು ಮಾಡುತ್ತಿರುವ ಪ್ರಚೋದನಕಾರಿ ಹೇಳಿಕೆ ಖಂಡನೀಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮೋದಿ ಸರ್ಕಾರ ಐತಿಹಾಸಿಕ ನಿರ್ಧಾರವನ್ನ ತೆಗೆದುಕೊಂಡಿದೆ. ವಿಪಕ್ಷಗಳು ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿವೆ. ಮಂಗಳೂರಿನ ಕೋಮು ಗಲಭೆ ಮಾಡಿಸಿದ್ದು ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರಬೇಕೆಂದು. ಪುಂಡ ಪೋಕರಿಗಳಿರುವ ಮತಾಂತರ ಸಂಘಟನೆಗಳ ಮೇಲಿರುವ 1,600 ಕೇಸ್‌ಗಳನ್ನ ಸಿದ್ದರಾಮಯ್ಯ ಸಿಎಂ ಇದ್ದಾಗ ತೆಗೆದು ಹಾಕಿದ್ದರು. ಟಿಪ್ಪು ಜಯಂತಿ ಆಚರಣೆ ಮಾಡಿ, ಮರಿ ಟಿಪ್ಪುಗಳನ್ನ ಹುಟ್ಟು ಹಾಕುವಂತೆ ಮಾಡಿದ್ದು ಸಿದ್ದರಾಮಯ್ಯನವರು ಎಂದು ವಾಗ್ದಾಳಿ ನಡೆಸಿದರು.
ಗೋಲಿಬಾರ್ನಲ್ಲಿ ಮೃತಪಟ್ಟವರು ಗಲಭೆ ಮಾಡಲು ಬಂದಿದ್ದರು. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಿಲ್ಲ ಎಂದಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಭಾರತದ ನಾಗರಿಕರಿಗೆ ಸಿಎಎ ಸಂಬಂಧವೇ ಇಲ್ಲದ ಕಾನೂನು. ಜಾತಿ ಆಧಾರದ ಮೇಲೆ ವಿಭಜನೆ ಆಗುತ್ತಿಲ್ಲ. ದಾಖಲೆಗಳ ಆಧಾರದ ಮೇಲೆ ಎನ್ಆರ್ಸಿ ಜಾರಿ ಆಗುತ್ತೆ. ಯಾವುದೇ ನೆಗೆಟಿವ್ ಡಿಕ್ಲರೇಷನ್ ಈ ಕಾಯ್ದೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಮಾತನಾಡಿದ್ದಾರೆ. ಪ್ರಣಾಳಿಕೆ ತಯಾರಿ ಹಂತದಲ್ಲೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ. 72 ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೆಲ್ಲ ತಿಳಿಸೋಕೆ ಜನಜಾಗೃತಿ ಮಾಡುತ್ತಿದ್ದೇವೆ. ಜನರ ದಿಕ್ಕು ತಪ್ಪಿಸುವ ರಾಜಕಾರಣಿಗಳಿಂದ ನಾವು ಈ ಕಾರ್ಯ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರಜ್ಞಾವಂತ ಕಾರ್ಯಕರ್ತರಿದ್ದಾರೆ. ಎಲ್ಲದ್ದಕ್ಕೂ ಹೌದ್ ಹುಲಿಯಾ ಅಂತ ಹೇಳೋ ಕಾರ್ಯಕರ್ತರಿಲ್ಲ. ಅಲ್ಪಸಂಖ್ಯಾತರನ್ನ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ಕೋಮು ಗಲಭೆಗೆ ಪ್ರಚೋದನೆ ನೀಡುವ ಮೂಲಕ ಇನ್ನೊಂದು ಸಮುದಾಯದ ಮೇಲೆ ಎತ್ತಿಕಟ್ಟೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.