ಹುಬ್ಬಳ್ಳಿ: ಕೊರೊನಾ ಸಂಕಷ್ಟದಿಂದಾಗಿ ಈ ಬಾರಿ ಕ್ರಿಸ್ಮಸ್ ಅನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ವಿಕಾಸನಗರದ ರೇಷ್ಮಾ ಫರ್ನಾಂಡಿಸ್ ಕುಟುಂಬಸ್ಥರು ಸೇರಿಕೊಂಡು ತಮ್ಮ ನಿವಾಸದಲ್ಲಿ ಕ್ರಿಬ್ (ಗೋದಲಿ) ನಿರ್ಮಾಣ ಮಾಡಿ ವಿನೂತನವಾಗಿ ಕ್ರಿಸ್ಮಸ್ ಹಬ್ಬ ಆಚರಿಸಿದ್ದಾರೆ.
ಕ್ರಿಬ್ ನಿರ್ಮಾಣ ಮಾಡಿ ಕ್ರಿಸ್ಮಸ್ ಹಬ್ಬ ಆಚರಣೆ ಇಂಟರ್‌ನೆಟ್, ಮೊಬೈಲ್, ಕಂಪ್ಯೂಟರ್‌ನಂತಹ ತಂತ್ರಜ್ಞಾನಗಳ ಬಳಕೆಯಿಂದಾಗಿ ಕುಟುಂಬಗಳ ಶಾಂತಿ, ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ ಎನ್ನಲಾಗಿದೆ. ಇದನ್ನು ಸುಧಾರಿಸುವ ಉದ್ದೇಶದಿಂದ ರೇಷ್ಮಾ ಫರ್ನಾಂಡಿಸ್ ಕುಟುಂಬಸ್ಥರು ಧರ್ಮಶಾಸ್ತ್ರದ ಪ್ರಕಾರ ಕ್ರಿಬ್ ಅಂದರೆ ಭತ್ತದ ಹುಲ್ಲು, ಲಾಳದ ಕಡ್ಡಿ ಮತ್ತಿತರೆ ವಸ್ತುಗಳಿಂದ ತೊಟ್ಟಿಲು, ನಕ್ಷತ್ರಗಳು ಸೇರಿದಂತೆ ಕ್ರಿಬ್ಗಳನ್ನು ನಿರ್ಮಿಸಿ ಕ್ರಿಸ್ಮಸ್ ಆಚರಿಸಿದ್ದಾರೆ.
ಕ್ರಿಸ್ಮಸ್ ಹಿನ್ನೆಲೆ ಹದಿನೈದು ದಿನಗಳ ಮುಂಚಿತವಾಗಿಯೇ ರೇಷ್ಮಾ ಅವರು ಭಾರೀ ತಯಾರಿ ನಡೆಸಿದ್ದಾರೆ. ತಮ್ಮ ಮನೆಯ ಆವರಣದಲ್ಲಿ ಸೂಕ್ತ ಸ್ಥಳ ಆಯ್ದುಕೊಂಡು ಈಚಲು ಮರದ ಗರಿಗಳನ್ನು ಉಪಯೋಗಿಸಿ, ಛಾವಣಿಯನ್ನು ಹಾಕಿ, ಸಣ್ಣ ಮತ್ತು ದೊಡ್ಡ ಗಾತ್ರದ ಶಿಲೆ ಅಥವಾ ಇತರೆ ಕಲ್ಲುಗಳನ್ನು ಉಪಯೋಗಿಸಿ ಕೃತಕ ಗುಡ್ಡ, ಬೆಟ್ಟ, ಪರ್ವತ ಪ್ರದೇಶ ನಿರ್ಮಿಸಿ, ಬಾಲ ಯೇಸು ಮೂರ್ತಿಯನ್ನು ಇಟ್ಟಿದ್ದಾರೆ. ಇಂದು ಮೇಣದ ಬತ್ತಿ ಬೆಳಗಿಸುವ ಮೂಲಕ ಯೇಸು ಜನ್ಮ ದಿನವನ್ನು ಸ್ವಾಗತಿಸಿ, ಶಾಂತಿಯುತವಾಗಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ.
ಇನ್ನು ಹುಬ್ಬಳ್ಳಿಯ ಕ್ಲಬ್ ರೋಡಿನಲ್ಲಿರುವ ಸೆಂಟ್ ಜೋಸೆಫ್ ಹಾಗೂ ಕಾರವಾರ ರಸ್ತೆಯಲ್ಲಿನ ಸಿಎಸ್ಐ ಚರ್ಚ್ನಲ್ಲೂ ಸಹ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಪಾರ್ಥನೆ ಸಲ್ಲಿಸಿದರು. ಚರ್ಚ್ಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸಿದವರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿತ್ತು.