ಹುಬ್ಬಳ್ಳಿ:ಕಿತ್ತು ತಿನ್ನುವ ಬಡತನದಲ್ಲಿ ವಿಚಿತ್ರ ಕಾಯಿಲೆಯಿಂದ ಮಕ್ಕಳು ಬಳಲುತ್ತಿದ್ದು, ಮಕ್ಕಳ ಚಿಕಿತ್ಸೆಗೆಗಾಗಿ ಕುಟುಂಬವೊಂದು ಪಡಬಾರದ ಕಷ್ಟ ಪಡುತ್ತಿದ್ದು, ಕುಟುಂಬ ತೀರಾ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಈ ಮುದ್ದಾದ ಮಕ್ಕಳ ಹೆಸರು ಕಾರ್ತಿಕ, ಕುನಾಲ್ ಹಾಗೂ ಗೋವಿಂದ ಅಂತ. ಹೊಸೂರಿನ ವಿನಾಯಕ ಕಬಾಡೆ ಮತ್ತು ಅಶ್ವಿನಿ ಕಬಾಡೆ ದಂಪತಿಯ ಮಕ್ಕಳು. ಕುನಾಲ್ ಹಾಗೂ ಕಾರ್ತಿಕ ಅವಳಿ ಮಕ್ಕಳಾಗಿದ್ದು, ಕಳೆದ 12 ವರ್ಷಗಳಿಂದ ವಿಚಿತ್ರವಾದ ರೋಗದಿಂದ ನರಳುತ್ತಿದ್ರೆ, ಇನ್ನು ಕಳೆದ 8 ವರ್ಷದಿಂದ ಮೂರನೇ ಮಗನಾದ ಗೋವಿಂದ ಕೂಡ ಅಂಗವಿಕಲ ಹಾಗೂ ಮಂದ ಬುದ್ಧಿಮಾಂದ್ಯನಾಗಿದ್ದಾನೆ. ಹೀಗಾಗಿ ಮಕ್ಕಳ ಚಿಕಿತ್ಸೆಗಾಗಿ ಇಡೀ ಕುಟುಂಬ ಸಾಕಷ್ಟು ಕಷ್ಟ ಅನುಭವಿಸುತ್ತಿದೆ.
ಕಳೆದ 10 ವರ್ಷಗಳಿಂದ ಮಕ್ಕಳ ಆರೋಗ್ಯಕ್ಕಾಗಿ ವಿನಾಯಕ ಕಬಾಡೆಯವರು ಸುಮಾರು 20 ಲಕ್ಷಕ್ಕೂ ಹೆಚ್ಚಿನ ಹಣವನ್ನು ಆಸ್ಪತ್ರೆ ಮತ್ತು ಔಷಧಿಗಾಗಿ ಖರ್ಚು ಮಾಡಿದ್ದಾರೆ. ಸ್ಥಿತಿವಂತರಾಗಿದ್ದ ಕುಟುಂಬ ಮಕ್ಕಳ ಚಿಕಿತ್ಸೆಗಾಗಿ ಎಲ್ಲವನ್ನು ಕಳೆದುಕೊಂಡು ಈಗ ಬೀದಿಗೆ ಬಂದಿದೆ. ಈಗ ಮಕ್ಕಳ ಔಷಧಿ ಸೇರಿದಂತೆ ಇತರೆ ಖರ್ಚು ನಿರ್ವಹಣೆ ಮಾಡಲಾಗದೆ ಕಂಗಾಲಾಗಿ ಕುಳಿತಿದೆ.
ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಈ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳು ಉಳಿಯುವ ಧೈರ್ಯವನ್ನು ವೈದ್ಯರು ನೀಡುತ್ತಿಲ್ಲ. ಹೊಸೂರಿನಲ್ಲಿ ಪಾನ್ ಶಾಪ್ ಇಟ್ಟುಕೊಂಡಿರುವ ವಿನಾಯಕ, ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಮ್ಮೆ ಮೂರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಲಕ್ಷಾಂತರ ಹಣ ಖರ್ಚಾಗುತ್ತದೆ. ಹೀಗಾಗಿ ಇಡೀ ಕುಟುಂಬ ಖರ್ಚು ಭರಿಸಲಾಗದೆ ಸಹಾಯಕ್ಕಾಗಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ.
ಮಕ್ಕಳ ಚಿಕಿತ್ಸೆಗಾಗಿ ಈಗಾಗಲೇ ಹಲವು ಸಂಘಟನೆಗಳು ಸಾಕಷ್ಟು ಸಹಾಯ ಮಾಡಿವೆ. ಆದ್ರೆ ಜನಪ್ರತಿನಿಧಿಗಳಿಗೆ ಸಹಾಯ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದ್ರೆ ಇಲ್ಲಿಯವರೆಗೂ ಸರ್ಕಾರದಿಂದ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸಹಾಯ ಸಹಕಾರ ಸಿಕ್ಕಿಲ್ಲ. ಮಕ್ಕಳ ಚಿಕಿತ್ಸೆಗೆ ಇನ್ನೂ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇದ್ದು, ಮಕ್ಕಳ ಚಿಕಿತ್ಸೆಗಾಗಿ ಹೃದಯವಂತರು ಸಹಾಯ ಮಾಡುವಂತೆ ಮಕ್ಕಳ ಪೋಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.