ಜ್ಞಾಪಕ ಶಕ್ತಿಯ ಮೂಲಕವೇ ವಿಶ್ವ ದಾಖಲೆ ಮಾಡಿದ ಇಬ್ಬರು ಮಕ್ಕಳು... ಹುಬ್ಬಳ್ಳಿ:ಈ ಮಕ್ಕಳಿಗೆ ಬಡತನವಿದೆ. ಆದ್ರೆ ಇವರು ಪಡೆದ ವಿದ್ಯೆಗೆ ಮಾತ್ರ ಬಡತನವಿಲ್ಲ. ಇಬ್ಬರು ಮಕ್ಕಳು ಹೊಂದಿರುವ ಪ್ರಪಂಚ ಜ್ಞಾನವು ಅವರನ್ನು ವಿಶ್ವದಾಖಲೆಯ ಪುಟಗಳಲ್ಲಿ ಸೇರುವಂತೆ ಮಾಡಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗಲ್ ಪಟ್ಟಣದ ಅಪ್ಪು ವಿದ್ಯಾಧಾಮದ ಬಾಲಕ ಶಿವರಾಜ ಹಾಗೂ ಬಾಲಕಿ ಸಂಜನಾ ಎಂಬ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಮಟ್ಟದ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ವಿವಿಧ ದಾಖಲೆಗಳ ಪಟ್ಟಿಯಲ್ಲಿದೆ ಇವರ ಹೆಸರು:ತಮ್ಮಲ್ಲಿರುವ ಸಾಮಾನ್ಯ ಜ್ಞಾನದ ಮೂಲಕ 20 ವರ್ಲ್ಡ್ ರೆಕಾರ್ಡ್ಸ್, ಎರಡು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್, ನಾಲ್ಕು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್, ಅಮೆರಿಕ ಸಂಸ್ಥೆಯಿಂದ ವರ್ಲ್ಡ್ ಟ್ಯಾಲೆಂಟ್ ಅವಾರ್ಡ್ ಸೇರಿದಂತೆ ನೂರಕ್ಕೂ ಅಧಿಕ ಪ್ರಶಸ್ತಿಯನ್ನು ಗಳಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದು, ಗಿನ್ನಿಸ್ ದಾಖಲೆಯತ್ತ ದಾಪುಗಾಲು ಹಾಕುತ್ತಿದ್ದಾರೆ.
ಇಂತಹ ಪ್ರತಿಭೆಗಳಿಗೆ ಶಿಕ್ಷಕ ಡಾ. ಮಹಾಂತೇಶ ಚಲವಾದಿ ಎಂಬುವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರು ಸುಮಾರು 168 ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿ ಶಿಕ್ಷಣ ನೀಡುತ್ತಿದ್ದಾರೆ. ಇನ್ನೂ ಈ ಇಬ್ಬರು ವಿದ್ಯಾರ್ಥಿಗಳು ಸುಮಾರು ಅರವತ್ತು ಸಾವಿರಕ್ಕೂ ಅಧಿಕ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ, ತಂತ್ರಜ್ಞಾನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತುಂಬಾ ಜ್ಞಾನವನ್ನು ಹೊಂದಿರುವ ಈ ಮಕ್ಕಳು ವಿಶ್ವದಾಖಲೆ ಮಾಡಿರುವುದು ವಿಶೇಷ.
ಶಿಕ್ಷಕ ಡಾ. ಮಹಾಂತೇಶ ಮಾತು:ಈ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ಪ್ರೋತ್ಸಾಹ ನೀಡಬೇಕು. ಮಕ್ಕಳ ದಿನಾಚರಣೆ ಅಥವಾ ರಾಜ್ಯೋತ್ಸವ ಪ್ರಯುಕ್ತ ಮಕ್ಕಳ ಸಾಧನೆ ಪರಿಗಣಿಸಿ ಪ್ರಶಸ್ತಿ ಕೊಡಬೇಕು. ಮಕ್ಕಳು ಬಡ ಕುಟುಂಬದವರಾದ್ದರಿಂದ ಇವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಶಿಕ್ಷಕ ಡಾ. ಮಹಾಂತೇಶ ಒತ್ತಾಯಿಸಿದ್ದಾರೆ. ಈಗಾಗಲೇ ದಾನಿಗಳ ಸಹಾಯದಿಂದ ಮಕ್ಕಳಿಗೆ ಕೆಲವು ಸೌಲಭ್ಯಗಳು ಲಭಿಸಿವೆ. ಜೊತೆಗೆ ಸರ್ಕಾರ ಶಿಷ್ಯವೇತನ ಕೊಟ್ಟರೆ, ಅವರಿಗೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು.
ಮಕ್ಕಳಿಬ್ಬರು ತಮ್ಮ ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡುವ ಗುರಿಯನ್ನು ಹೊಂದಿದ್ದು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದು ಶಿಕ್ಷಕ ಡಾ. ಮಹಾಂತೇಶ ಮನವಿ ಮಾಡಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವ ಗಣೇಶ.. ಕುಲಕರ್ಣಿ ಗಲ್ಲಿಯ ಗಣೇಶೋತ್ಸವ ಮಂಡಳಿಯಿಂದ ಸಾಮಾಜಿಕ ಕಳಕಳಿ