ಧಾರವಾಡ:ರಾಜ್ಯದಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ವೋಚ್ಚ ನ್ಯಾಯಾಲಯ ನಿರ್ದೇಶನದಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಲ್ಲಿ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಳಿಸಿರುವ 'ಮಕ್ಕಳ ಸ್ನೇಹಿ ನ್ಯಾಯಾಲಯ'ವನ್ನು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಹರೀಶ ಕುಮಾರ ಉದ್ಘಾಟಿಸಿದರು.
ಧಾರವಾಡದಲ್ಲಿ 'ಮಕ್ಕಳ ಸ್ನೇಹಿ ನ್ಯಾಯಾಲಯ' ಲೋಕಾರ್ಪಣೆ.. - Children Friendly Court
ಧಾರವಾಡದ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಳಿಸಿರುವ 'ಮಕ್ಕಳ ಸ್ನೇಹಿ ನ್ಯಾಯಾಲಯ'ವನ್ನು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಹರೀಶ ಕುಮಾರ ಉದ್ಘಾಟಿಸಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಡಿ ಮೊದಲ ಹಂತವಾಗಿ ರಾಜ್ಯದ 10 ಜಿಲ್ಲೆಗಳಲ್ಲಿ 'ಮಕ್ಕಳ ಸ್ನೇಹಿ ನ್ಯಾಯಾಲಯ'ಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ. ಅದರಂತೆ ಧಾರವಾಡ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಂಡಿರುವ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಸಂತ್ರಸ್ತ ಮಗುವಿಗೆ ಪ್ರತ್ಯೇಕ ಕೊಠಡಿ, ಆರೋಪಿ ತನಿಗೆ ಬೇರೆ ಕೊಠಡಿ, ಮಕ್ಕಳ ಶೌಚಾಲಯ, ಅಡುಗೆ ಮನೆ, ಅಗತ್ಯವಿದ್ದಲ್ಲಿ ಮಗುವಿನ ಪಾಲಕರಿಗೆ ರಾತ್ರಿ ವೇಳೆ ಉಳಿಯಲು ಕೊಠಡಿ, ಕಟ್ಟಡ ಆವರಣದಲ್ಲಿ ಮಕ್ಕಳಿಗಾಗಿ ಆಟದ ಮೈದಾನ, ಮಕ್ಕಳ ಪಾಲಕರಿಗೆ ಪ್ರತ್ಯೇಕ ಕೊಠಡಿ, ವಿಡಿಯೋ ಕಾನ್ಪರೆನ್ಸ್ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗಾಗಿ ಗ್ರಂಥಾಲಯ, ವರ್ಣಮಾಲೆ ಅಕ್ಷರಗಳಿರುವ ಚಾಪೆ (ಮ್ಯಾಟ್)ಗಳ ವ್ಯವಸ್ಥೆ, ನ್ಯಾಯಾಧೀಶರ ಕೋರ್ಟ್ ಹಾಲ್ ಹಾಗೂ ನ್ಯಾಯಾಧೀಶರಿಗೆ ಪ್ರತ್ಯೇಕ ಕೊಠಡಿ, ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆ ನಂತರ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಪ್ರತಿ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ, 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಮತ್ತು ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಎಂ ಪಂಚಾಕ್ಷರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.