ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಹುಬ್ಬಳ್ಳಿ- ಧಾರವಾಡದ ಪ್ರತಿಷ್ಠಿತ ಬಿ.ಆರ್.ಟಿ.ಎಸ್ ಯೋಜನೆ ಈಗ ಸರ್ಕಾರಕ್ಕೆ ತಲೆನೋವಾಗಿದೆ. ಉಚಿತ ಬಸ್ ಪ್ರಯಾಣದ ಭರವಸೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಈಗ ಚಿಗರಿ ಚಿಂತಿಸುವ ಕಾಲಘಟ್ಟಕ್ಕೆ ಬಂದು ತಲುಪಿದೆ.
ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯ ಚಿಗರಿ ಬಸ್, ಸಾರಿಗೆ ವ್ಯಾಪ್ತಿಯ ಹವಾ ನಿಯಂತ್ರಿತ ಬಸ್ ಆಗಿದ್ದು, ಚಿಗರಿ ಬಸ್ನಲ್ಲೂ ಫ್ರೀ ಬಿಡಬೇಕು ಎಂಬ ಮಾತು ಕೇಳಿಬಂದಿದೆ. ಆದರೆ ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವ ಹವಾನಿಯಂತ್ರಿತ ಚಿಗರಿ ಬಸ್ನಲ್ಲಿ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಸರ್ಕಾರ ಆದೇಶ ಹೊರಡಿಸಿದಂತೆ ಹವಾನಿಯಂತ್ರಿತ ಬಸ್ನಲ್ಲಿ ಫ್ರೀ ಇಲ್ಲ. ಹೀಗಿದ್ದರೂ ಬಿ.ಆರ್.ಟಿ.ಎಸ್ ಸಾರಿಗೆಯನ್ನು ಶಕ್ತಿ ಸ್ಕೀಮ್ನಲ್ಲಿ ಅನುಮತಿ ನೀಡಲು ಮನವಿ ಮಾಡಿದ್ದೇವೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಎಂಡಿ ಭರತ್.
ಸದ್ಯ ಇರುವ ಆದೇಶದಂತೆ ಚಿಗರಿ ಬಸ್ನಲ್ಲಿ ಫ್ರೀ ಇಲ್ಲ. ಆದರೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಚಿಗರಿ ಹವಾ ನಿಯಂತ್ರಿತ ಬಸ್ ಆಗಿರುವ ಕಾರಣ ಸಹಜ ನಷ್ಟದಲ್ಲಿದೆ. ಇತ್ತ ಮಹಿಳೆಯರು ಚಿಗರಿ ಬಸ್ನಲ್ಲೂ ಫ್ರೀ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಹುಬ್ಬಳ್ಳಿ- ಧಾರವಾಡ ಜನತೆ ಚಿಗರಿ ಬಸ್ನಲ್ಲಿ ಜಾಸ್ತಿ ಓಡಾಡುವ ಹಿನ್ನೆಲೆಯಲ್ಲಿ ಫ್ರೀ ಬಿಟ್ಟರೆ ಅನುಕೂಲ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ಸರ್ಕಾರದ ಆದೇಶದವರೆಗೂ ಉಚಿತ ಪ್ರಯಾಣಕ್ಕೆ ಅನುಮತಿ ಇಲ್ಲ ಎಂದರು.
ಬಿಆರ್ಟಿಎಸ್ ಕುರಿತು..:ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದಲ್ಲಿ ಸುಸ್ಥಿತ ಸಾರಿಗೆ ಕಲ್ಪಿಸುವುದಕ್ಕಾಗಿ ಕೈಗೆತ್ತಿಕೊಳ್ಳಲಾಗಿರುವ 'ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ' (Hubballi-Dharwad Bus Rapid Transit system (HDBRTS) ದೇಶದಲ್ಲಿಯೇ ವಿಶಿಷ್ಠವಾಗಿರುವ ಯೋಜನೆಯಾಗಿದ್ದು, ಅನುಷ್ಠಾನಕ್ಕಾಗಿ ಕಂಪನಿ ಕಾಯ್ದೆಯಡಿ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿ ನಿಯಮಿತ ಎಂದು 2012 ರಲ್ಲಿ ನೋಂದಣಿಯಾಗುವ ಮೂಲಕ ತನ್ನ ಕಾರ್ಯ ಚಟುವಟಿಕೆ ನಿರ್ವಹಿಸುತ್ತಿದೆ.