ಹುಬ್ಬಳ್ಳಿ: "ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿ ಸಂಚಲನ ಉಂಟು ಮಾಡಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಗಿದೆ. ಅದಕ್ಕೆ ಶಾ ಅವರು ಇನ್ನಷ್ಟು ಶಕ್ತಿ, ಹುರುಪು ಕೊಟ್ಟಿದ್ದಾರೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, "ಯಾರು ಏನೇ ಹೇಳಲಿ, ರಿಯಾಲಿಟಿ ಬೇರೆಯೇ ಇದೆ. ಕಾಂಗ್ರೆಸ್‌ನವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಂದು ಪೋಸ್ ಕೊಡುತ್ತಿದ್ದಾರೆ. ಅದರೆ ನಮ್ಮ ಗೆಲುವು ಖಂಡಿತ" ಎಂದರು.
"ಅಮಿತ್ ಶಾ ನಿನ್ನೆ ಒಂದು ದಿನದ ಭೇಟಿಯಿಂದ ಸಂಚಲನ ಮೂಡಿಸಿದ್ದಾರೆ. ಭಾರತೀಯ ಜನತಾ ಪಕ್ಷ ಗಟ್ಟಿಯಾಗಿದೆ, ಪ್ರಬಲವಾಗಿದೆ. ಇನ್ನಷ್ಟು ಶಕ್ತಿ, ಹುರುಪು, ಹುಮ್ಮಸ್ಸನ್ನು ಅವರು ಕೊಟ್ಟಿದ್ದಾರೆ. ಸಾರ್ವಜನಿಕರಲ್ಲಿರುವ ಭಾವನೆಗಳು ಅವರ ಎಲ್ಲಾ ಸಭೆಗಳಲ್ಲಿಯೂ ವ್ಯಕ್ತವಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿರುವುದು ಸ್ಪಷ್ಟ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷದವರು ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎನ್ನುವಂತೆ ಪೋಸ್ ಕೊಡುತ್ತಿದ್ದಾರೆ. ಆದರೆ ಗ್ರೌಂಡ್ ರಿಯಾಲಿಟಿ ಬೇರೆ ಇದೆ. ನಮ್ಮ ನಾಯಕರು ಆಗಮಿಸಿದಾಗ ಸತ್ಯ ಅಭಿವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕ್ರಮಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅಷ್ಟೇ ಅಲ್ಲ. ಅದು ಸ್ಫೂರ್ತಿ, ಹುರುಪು ಮೂಡಿಸುತ್ತಿದ್ದು ನಮ್ಮ ಗೆಲುವನ್ನು ಹೇಳುತ್ತಿದೆ. ನಮ್ಮ ಪಕ್ಷ ಸಂಘಟನೆ ಬೂತ್ ಮಟ್ಟದಿಂದ ಪ್ರಬಲವಾಗಿದೆ. ಅದುವೇ ನಮಗೆ ಆಧಾರ, ಅದೇ ನಮ್ಮ ಶಕ್ತಿ" ಎಂದು ತಿಳಿಸಿದರು.