ಹುಬ್ಬಳ್ಳಿ :ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ಸಾರ್ವಜನಿಕರು ಅತ್ಯಂತ ಗೌರವದಿಂದ ಕಾಣುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿನ ಯೋಧನೋರ್ವ ಮೂರು ಮದುವೆಯಾಗಿದ್ದು, ಆತನಿಂದ ಮೋಸ ಹೋದ ಮೊದಲ ಹಾಗೂ ಎರಡನೇ ಪತ್ನಿಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹುಬ್ಬಳ್ಳಿ ತಾಲೂಕಿನ ನೆಲವಡಿ ಗ್ರಾಮದ ನಿವಾಸಿ ಗುರುಸಿದ್ದಪ್ಪ ಶಿರೋಳ ಎಂಬಾತ ಪಂಜಾಬಿನಲ್ಲಿ ಬಿಎಸ್ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬಸ್ಥರೇ ನಿಶ್ಚಯಿಸಿ 2015 ರಲ್ಲಿ ಗುರುಸಿದ್ದಪ್ಪನಿಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ರೇಖಾ ಎಂಬುವರೊಂದಿಗೆ ಮದುವೆ ಮಾಡಿದ್ದರು. ಇವರಿಗೆ ಓರ್ವ ಮಗ ಕೂಡ ಇದ್ದಾನೆ. ಆದ್ರೆ ಮೊದಲ ಪತ್ನಿ ರೇಖಾ ಜೊತೆ ಗುರುಸಿದ್ದಪ್ಪ ಕಿರಿಕ್ ಮಾಡಿಕೊಂಡಿದ್ದ. ಪತಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನೊಂದಿಗೆ ಜೀವನ ನಡೆಸಲು ಆಗಲ್ಲ ಎಂದು ರೇಖಾ ಮಗುವಿನ ಜೊತೆ ತವರು ಸೇರಿದ್ದರು.
ಇತ್ತ ಮೊದಲ ಪತ್ನಿ ರೇಖಾ ತವರು ಮನೆ ಸೇರುತ್ತಿದ್ದಂತೆ ಗುರುಸಿದ್ದಪ್ಪ, ಮ್ಯಾಟ್ರಿಮೋನಿಯಲ್ಲಿ ಮಂಜುಳಾ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದನು. ಮದುವೆಯಾದ ವಿಚಾರವನ್ನು ಬಚ್ಚಿಟ್ಟು ಆಕೆಯೊಂದಿಗೆ ಬಾಡಿಗೆ ಮನೆಯಲ್ಲಿ ಗುಟ್ಟಾಗಿ ಸಂಸಾರ ನಡೆಸುತ್ತಿದ್ದನು. ಇಷ್ಟಕ್ಕೆ ಗುರುಸಿದ್ದಪ್ಪನ ರಂಗೀನಾಟ ನಿಂತಿಲ್ಲ. ಮಂಜುಳಾ ನಂತರ ಸುಧಾ ಎಂಬುವರನ್ನು ಸಹ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ.