ಬಿತ್ತಿದ ಬೀಜ ಹುಸಿ: ಕಂಗಾಲಾದ ಹುಬ್ಬಳ್ಳಿಯ ಅನ್ನದಾತ..!
ಹುಬ್ಬಳ್ಳಿಯಲ್ಲಿ ರೈತರಿಗೆ ಕಳಪೆ ಹತ್ತಿ ಬೀಜ ನೀಡಿರುವ ಆರೋಪ ಕೇಳಿ ಬಂದಿದ್ದು, ಬಿತ್ತಿದ ಬೀಜ ಹುಸಿ ಹೋಗಿ ಮತ್ತೊಮ್ಮೆ ಬಿತ್ತನೆ ಮಾಡುವಂತ ಪರಿಸ್ಥಿತಿ ಎದುರಾಗಿದೆ.
ಹುಬ್ಬಳ್ಳಿ: ರೈತನ ಕೃಷಿಯ ಬದುಕು ಹೂವಿನ ದಾರಿಯಲ್ಲ. ಅದು ನಿಜಕ್ಕೂ ಕಷ್ಟದ ಕವಲು ದಾರಿಯಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದರೂ. ಬೆಳೆ ಕೈಗೆ ಬರುವ ಮುನ್ನ ಸಾಕಷ್ಟು ಸವಾಲುಗಳು ರೈತನಿಗೆ ಎದುರಾಗುತ್ತಿವೆ. ಬಿತ್ತಿದ ಬೀಜ ಹುಸಿ ಹೋಗಿ ಮತ್ತೊಮ್ಮೆ ಬಿತ್ತನೆ ಮಾಡುವಂತ ಪರಿಸ್ಥಿತಿ ಎದುರಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ರೈತನಿಗೆ ಮತ್ತೊಮ್ಮೆ ಬೀಜ ಗೊಬ್ಬರದ ಹೊರೆಯಾಗುತ್ತಿದೆ.
ಧಾರವಾಡ ಜಿಲ್ಲೆಯಾದ್ಯಂತ ಹತ್ತಿ ಬೆಳೆ ಹಾಕಿರುವ ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಮೊದಲು ಹೊಲವನ್ನು ಬಿತ್ತನೆಗೆ ಸಿದ್ಧ ಮಾಡಿ ದುಬಾರಿ ಬೆಲೆಯ ಬೀಜ ಗೊಬ್ಬರವನ್ನು ತೆಗೆದುಕೊಂಡು ಬಂದು ಬಿತ್ತನೆ ಮಾಡಿ ಇನ್ನೇನು ಬೆಳೆಯನ್ನು ಎದುರು ನೋಡುತ್ತಿರುವ ರೈತನಿಗೆ ಬೀಜ ಹುಸಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜೈದರ್ ಹಾಗೂ ಸ್ಥಳೀಯ ಬಿತ್ತನೆ ಬೀಜಗಳನು ಹುಸಿಯಾಗಿರುವದು ಅನ್ನದಾತನನ್ನು ಕಂಗಾಲಾಗಿಸಿವೆ. ಬಿತ್ತನೆಯ ನಂತರ ಬೀಜ ಹುಸಿಯಾಗುವುದು ಸಾಮಾನ್ಯ. ಆದರೆ ಎಲ್ಲಾ ಬೀಜಗಳು ಹುಸಿಯಾಗುವುದು ವಿರಳ. ಆದರೆ ಈ ಬಾರಿ ಬಿತ್ತಿದ ಬೀಜ ಮೊಳಕೆ ಒಡೆಯದೇ ಭೂಮಿಯಲ್ಲಿ ಉಳಿಯುತ್ತಿರುವುದು ರೈತನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಇದರಲ್ಲಿ ಮಳೆಯ ಸಮಸ್ಯೆಯಿಂದ ಆಗಿದೆಯೋ ಅಥವಾ ಕಳಪೆ ಬೀಜದ ಸಮಸ್ಯೆಯೊ ಈ ಬಗ್ಗೆ ಕೃಷಿ ಇಲಾಖೆ ಗಮನಹರಿಸಬೇಕಿದೆ.