ಧಾರವಾಡ:ರಾಜ್ಯ ರಾಜಕಾರಣದಲ್ಲಿ ಆಗಲಿದೆಯಾ ನಾಯಕತ್ವ ಬದಲಾವಣೆ? ಎಂಬ ಪ್ರಶ್ನೆ ಮೂಡಿದೆ. ಧಾರವಾಡದ ಗೊಂಬೆ ಭವಿಷ್ಯದಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆ ಸಿಕ್ಕಿದೆ. ಚುನಾವಣೆ ವೇಳೆಯಲ್ಲಿಗೆ ನಾಯಕತ್ವ ಬದಲಾವಣೆಯಾಗಬಹುದು ಎಂದು ಬೊಂಬೆ ಭವಿಷ್ಯ ನುಡಿದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ವ್ಯಾಪ್ತಿಯ ಹನುಮನಕೊಪ್ಪದಲ್ಲಿ ಯುಗಾದಿ ಹಿಂದಿನ ದಿನ ಗೊಂಬೆ ಮಾಡಿಡಲಾಗಿರುತ್ತದೆ. ಅವುಗಳಿಗೆ ಧಕ್ಕೆಯಾದ್ರೆ ನಾಯಕತ್ವ ಬದಲಾವಣೆಯಾಗುತ್ತೆ ಎಂಬುದು ಗೊಂಬೆ ಭವಿಷ್ಯವಾಗಿದೆ.
ಯುಗಾದಿ ದಿನ ನಡೆಯುವ ಮಣ್ಣಿನ ಬೊಂಬೆ ಭವಿಷ್ಯದಲ್ಲಿ ಕರ್ನಾಟಕದ ದಿಕ್ಕಿನ ಗೊಂಬೆ ಕಾಲಿಗೆ ಧಕ್ಕೆಯಾಗಿದೆ. ಈ ಮೂಲಕ ನಾಯಕತ್ವ ಬದಲಾವಣೆಯ ಮುನ್ಸೂಚನೆ ಕೊಟ್ಟಿದೆ. ಯಡಿಯೂರಪ್ಪ ಬದಲಾವಣೆಯನ್ನು ಸಹ ಹನುಮನಕೊಪ್ಪದ ಬೊಂಬೆಗಳು ಮುಂಚಿತವಾಗಿ ಭವಿಷ್ಯ ಹೇಳಿದ್ದವು. ಎರಡು ವರ್ಷದ ಹಿಂದೆಯೂ ಕರ್ನಾಟಕದ ಗೊಂಬೆಗೆ ಧಕ್ಕೆಯಾಗಿತ್ತು. ನಾಲ್ಕು ತಿಂಗಳ ಮೊದಲೇ ನಾಯಕತ್ವ ಬದಲಾವಣೆ ಭವಿಷ್ಯ ನುಡಿದಿತ್ತು. ಈಗ ಅದೇ ರೀತಿ ಮತ್ತೊಮ್ಮೆ ಭವಿಷ್ಯ ಬಂದಿದೆ.
ಗ್ರಾಮದ ಹಳ್ಳದ ದಂಡೆಯಲ್ಲಿ ನಡೆಯುವ ವಿಸ್ಮಯ ಭವಿಷ್ಯದ ಮೇಲೆ ಗ್ರಾಮಸ್ಥರು ಅಪಾರ ನಂಬಿಕೆ ಇಟ್ಟಿದ್ದಾರೆ. ಯುಗಾದಿ ಅಮಾವಾಸ್ಯೆ ದಿನ ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪಾಡ್ಯದ ದಿನ ನಸುಕಿನ ಜಾವ ಆ ಸ್ಥಳ ನೋಡುವ ಹಿರಿಯರು ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯ ಹೇಳುತ್ತಾರೆ. ಇಂದಿರಾ ಗಾಂಧಿ ನಿಧನದ ವರ್ಷವೂ ಸಹ ಭವಿಷ್ಯ ನಿಜವಾಗಿತ್ತು. ರಾಷ್ಟ್ರ ನಾಯಕರ ಗೊಂಬೆ ಸಂಪೂರ್ಣವಾಗಿ ಉರುಳಿ ಬಿದ್ದಿತ್ತು. ಅದೇ ವರ್ಷ ಇಂದಿರಾ ಗಾಂಧಿ ಹತ್ಯೆಯಾಗಿತ್ತು ಎನ್ನುತ್ತಾರೆ ಗ್ರಾಮಸ್ಥ ನಾಗರಾಜ್ ಹಾರೋಬೆಳವಡಿ.
ಈಗ ಗೊಂಬೆಗೆ ಧಕ್ಕೆಯಾಗಿದೆ. ಹೀಗಾಗಿ ಗೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬ ಭವಿಷ್ಯ ಹೇಳಿದೆ. ಬಿಎಸ್‌ವೈ ಸಿಎಂ ಆಗಿದ್ದಾಗಲೂ ಗೊಂಬೆಗೆ ಧಕ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.