ಧಾರವಾಡ :ಕಳೆದ ಕೆಲ ತಿಂಗಳುಗಳ ಹಿಂದೆಯಿಂದ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.
ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಜೈಭಾರತ್ ಕಾಲೋನಿಯಲ್ಲಿ ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾಗಿತ್ತು. ಅಲ್ಲದೇ, ಹೂಲಿಕೇರಿಯ ಇಂದಿರಮ್ಮ ಕೆರೆ ಒಡೆದು ಮೆಕ್ಕೆಜೋಳ ಬೆಳೆ ನಾಶವಾಗಿತ್ತು. ಈ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪ್ರಮಾಣ ವೀಕ್ಷಿಸಿದರು.
ಅಲ್ಲಿಂದ ಹೂಲಿಕೇರಿ ಕಕ್ಕೇರಿ ರಸ್ತೆ ಅಳ್ನಾವರದ ಡೌಗಿ ನಾಲಾ, ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಣಚಿ ಸೇತುವೆ ಕಲಕೇರಿ ರಸ್ತೆ ಹಾಗೂ ಅರವಟಗಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
ಕೇಂದ್ರ ಅಧ್ಯಯನ ತಂಡದಲ್ಲಿ ಹಿರಿಯ ಅಧಿಕಾರಿಗಳಾದ ಗುರುಪ್ರಸಾದ್ ಮತ್ತು ಮಹೇಶ್ಕುಮಾರ್ ಇದ್ದರು. ತಂಡಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ತಹಶೀಲ್ದಾರರು ಹಾನಿ ಸ್ಥಳಗಳ ಕುರಿತು ಮಾಹಿತಿ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಿಗ ಕೇಂದ್ರ ಅಧ್ಯಯನ ತಂಡ ಭೇಟಿ..
ಕಳೆದ ತಿಂಗಳು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಚಿಕ್ಕೋಡಿ ಉಪವಿಭಾಗದಲ್ಲಿ ನದಿಗಳಲ್ಲಿ ಪ್ರವಾಹ ಉಂಟಾಗಿತ್ತು. ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತ್ತು. ಈ ಹಿನ್ನೆಲೆ ಇವತ್ತು ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಭೇಟಿ ನೀಡಿದರು.
ಹುಕ್ಕೇರಿ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅಧ್ಯಯನ ತಂಡ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಸುಶೀಲ ಪಾಲ್ ನೇತೃತ್ವದ ತಂಡ ಹೀರಣ್ಯಕೇಶಿ ನದಿ ತೀರದ ನೆರೆ ಪೀಡಿತ ಪ್ರದೇಶಗಳಿಗೆ ಹಾಗೂ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಮ್ಮ ದೇವಸ್ಥಾನ, ಯರನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
ಅಧಿಕಾರಿಗಳಿಂದ ನೆರೆ ಕುರಿತು ಸಂಪೂರ್ಣ ಮಾಹಿತಿ ಪಡೆದ ತಂಡ, 15 ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದರು. ಕೇಂದ್ರ ತಂಡಕ್ಕೆ ಜಿಲ್ಲಾಡಳಿತದ ಜೊತೆಗೆ ವಿಪತ್ತು ನಿರ್ವಹಣಾ ಆಯುಕ್ತರ ಸಾಥ್ ನೀಡಿದ್ದಾರೆ. ನಾಳೆ ಕೇಂದ್ರ ಅಧ್ಯಯನ ತಂಡ ಚಿಕ್ಕೋಡಿ ಹಾಗೂ ಅಥಣಿ ಭಾಗದ ಕೃಷ್ಣಾ ನದಿ ಪ್ರವಾಹದಿಂದ ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಲಿದೆ.