ಧಾರವಾಡ:ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರದ ಬರ ಅಧ್ಯಯನ ತಂಡ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನ ನಡೆಸಿತು. ಕೇಂದ್ರದ ಅಧಿಕಾರಿಗಳು ಬೆಳೆ ಹಾನಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪಡೆದುಕೊಂಡರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲೆಯ ಮಳೆಕೊರತೆ, ಬಿತ್ತನೆಯಾಗದ ಪ್ರದೇಶ ಹಾಗೂ ಬೆಳೆ ನಾಶ, ಹಸಿರು ಬರದ ಕುರಿತು ಮನವರಿಕೆ ಮಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, "ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಜಿಲ್ಲೆಯ ರೈತರು ಜೂನ್ ತಿಂಗಳಲ್ಲಿ ಮಾಡಬೇಕಿದ್ದ ಬಿತ್ತನೆಯನ್ನು ಮುಂದೂಡಿದರು. ಜೂನ್ ಅಂತ್ಯದೊಳಗೆ ಸಾಮಾನ್ಯ ಮಳೆಗಿಂತ ಶೇ.65 ರಷ್ಟು ಮಳೆ ಕೊರತೆಯಾಗಿದ್ದು ಜಿಲ್ಲೆಯಲ್ಲಿ ಶೇ.16 ರಷ್ಟು ಮಾತ್ರ ಬಿತ್ತನೆ ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ಅಧಿಕ ಮಳೆಯಾದರೂ ಹಂಗಾಮು ತಡವಾಗಿದ್ದರಿಂದ ಶೇ.68 ರಷ್ಟು ಮಾತ್ರ ಭೂಮಿ ಬಿತ್ತನೆ ಮಾಡಲಾಯಿತು".
"ಆಗಸ್ಟ್ ತಿಂಗಳಲ್ಲಿ ಮತ್ತೆ ಶೇ.65 ರಷ್ಟು ಮಳೆ ಕೊರತೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಕಡಿಮೆ ಮಳೆಯಾಗಿದ್ದರಿಂದ ಬಿತ್ತನೆಯಾಗಿರುವ ಬೆಳೆಯ ಶೇ.91 ರಷ್ಟು ಹಾನಿಯಾಗಿದೆ. ಜಿಲ್ಲೆಯಲ್ಲಿ ಬೆಳೆಯು ಕಣ್ಣಿಗೆ ಹಸಿರಾಗಿ ಕಂಡರೂ ಅದರಲ್ಲಿ ಕಾಳು ಉತ್ಪತ್ತಿಯಾಗಿಲ್ಲ. ಹಲವಾರು ರೈತರು ಬಿತ್ತನೆ ಮಾಡಿಲ್ಲ. ಮಳೆ ಕೊರತೆಯಿಂದಾಗಿ ತೀವ್ರ ಬರಗಾಲದ ನಡುವೆಯೂ ಹಸಿರು ಬರ ಹೆಚ್ಚಾಗಿದೆ" ಎಂದು ವಿವರಿಸಿದರು.