ಹುಬ್ಬಳ್ಳಿ : ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಮಾಡುವವರನ್ನು ಹಾಗೂ ಬೆಂಬಲಿಸುವವರನ್ನು ಜನ ಮನೆಗೆ ಕಳುಹಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಾಸಕ ತನ್ವೀರ್ ಸೇಠ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕಾರಣಿ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಈಗಲೂ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ. ಸರ್ಕಾರದಿಂದ ಟಿಪ್ಪು ಜಯಂತಿ ಮಾಡಬಾರದು ಅನ್ನೋದಿದೆ. ಈದ್ಗಾ ಮೈದಾನದಲ್ಲಿ ನಾವೇನು ಟಿಪ್ಪು ಜಯಂತಿ ಮಾಡಿ ಎಂದು ಹೇಳಿಲ್ಲ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಟಿಪ್ಪು ಕನ್ನಡ ವಿರೋಧಿ ಇದು ನನ್ನ ವೈಯಕ್ತಿಕ ನಿಲುವು ಮತ್ತು ಪಕ್ಷದ ನಿಲುವು ಕೂಡ ಆಗಿದೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ವಿರುದ್ಧ ವಾಗ್ದಾಳಿ : ಇನ್ನು ಯಾವುದೇ ಮೂರ್ತಿ ನಿಲ್ಲಿಸಬೇಕೆಂದರೂ ಸರ್ಕಾರದ ಅನುಮತಿ ಪಡೆಯಬೇಕು. ಜನ ಇದಕ್ಕೆಲ್ಲ ಉತ್ತರ ಕೊಡುತ್ತಾರೆ. ನಾವು ಯಾವ ಕಾಲದಲ್ಲಿ ಉತ್ತರ ಕೊಡಬೇಕು ಕೊಡುತ್ತೇವೆ. ನಾವು ಬೇಜವಾಬ್ದಾರಿಯಿಂದ ಮಾತಾನಾಡೋಕೆ ಆಗಲ್ಲ ಎಂದು ತನ್ವೀರ್ ಸೇಠ್ಗೆ ಟಾಂಗ್ ನೀಡಿದರು. ಅವರೇನು ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ, ಊದುಬತ್ತಿ ಬೆಳಗಿ ಆರತಿ ಮಾಡ್ತಾರಾ ನೋಡೋಣ. ತುಷ್ಟೀಕರಣದ ರಾಜಕಾರಣಕ್ಕೆ ಇದೊಂದು ವೇದಿಕೆ ಎಂದು ಟೀಕಿಸಿದರು.
ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರಿಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ನಾನು, ಮುಖ್ಯ ಮಂತ್ರಿಗಳು, ಅಶೋಕ್, ಅಶ್ವತ್ಥ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ದೇವೇಗೌಡ ನಮ್ಮ ರಾಜ್ಯದ ಒಬ್ಬರೇ ಮಾಜಿ ಪ್ರಧಾನಿ. ಅವರನ್ನು ಕರೆದಿಲ್ಲ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿಗಳು ನಾನು ಕರೆದಿರುವುದಾಗಿ ಹೇಳಿದ್ದಾರೆ. ಆದರೆ, ದೇವೇಗೌಡರು ಯಾಕೆ ಬಂದಿಲ್ಲ ಅನ್ನೋ ಬಗ್ಗೆ ವಿಚಾರಿಸುವುದಾಗಿ ಹೇಳಿದರು.
ಟಿಪ್ಪು ಪ್ರತಿಮೆ ಮಾಡುವವರನ್ನು ಬೆಂಬಲಿಸಿದವರನ್ನೂ ಜನ ಮನೆಗೆ ಕಳಿಸುತ್ತಾರೆ : ಪ್ರಹ್ಲಾದ್ ಜೋಶಿ ಕುಮಾರಸ್ವಾಮಿ ಆರೋಪಕ್ಕೆ ಜೋಶಿ ತಿರುಗೇಟು: ಕುಮಾರಸ್ವಾಮಿ ಕುಟುಂಬ ಹಲವು ವರ್ಷಗಳಿಂದ ಮುಖ್ಯಮಂತ್ರಿ, ಮಂತ್ರಿ ಆಗಿದ್ದಾರೆ. ಆದರೆ ಅವರು ಕೆಂಪೇಗೌಡ ಪುತ್ಥಳಿ ಸ್ಥಾಪನೆ ಮಾಡಲಿಲ್ಲ, ಹೆಸರು ಇಡಲಿಲ್ಲ. ಅವರ ಕುಟುಂಬಕ್ಕೆ ಆಗ ಕೆಂಪೇಗೌಡರ ನೆನಪು ಆಗಲಿಲ್ಲ. ನಾನು ದೇವೇಗೌಡರ ಬಗ್ಗೆ ಮಾತಾನಾಡಲ್ಲ, ಅವರು ಹಿರಿಯರು. ಆದರೆ ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆ ಕಿಚ್ಚಿನಿಂದ ಮಾತಾನಾಡುತ್ತಿದ್ದಾರೆ. ನಾವು ಮಾಡಲಾಗದ್ದನ್ನು ಬಿಜೆಪಿ ಮಾಡಿರುವುದರಿಂದ ಹೊಟ್ಟೆ ಕಿಚ್ಚಿನಿಂದ ಮಾತನಾಡುತ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ರಾಹುಲ್ ತರ ಮಾತನಾಡುತ್ತಿದ್ದಾರೆ: ಸಿದ್ದರಾಮಯ್ಯ ರಾಹುಲ್ ಗಾಂಧಿ ನೆರಳಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ. ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ನಡೆದಿದ್ದಾರೆ. ಸಹವಾಸ ದೋಷದಿಂದ ಸಿದ್ದರಾಮಯ್ಯ ಈ ಥರ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಹೆದ್ದಾರಿ ಹಾಗೂ ರೈಲ್ವೆಯಲ್ಲಿ ಅಭಿವೃದ್ಧಿ: ನಿನ್ನೆ ಪ್ರಧಾನಮಂತ್ರಿಗಳು ಎರಡು ಮೂರು ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಂದೇ ಭಾರತ್ ರೈಲು ಭಾರತದಲ್ಲಿ ನಿರ್ಮಾಣವಾಗಿದೆ. ಕಳೆದ ಏಳು ವರ್ಷದಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಹೆದ್ದಾರಿ ಹಾಗೂ ರೈಲ್ವೆಯಲ್ಲಿ ಅಭೂತ ಪೂರ್ವ ಕೆಲಸ ಆಗಿದೆ. 52 ಸಾವಿರ ಕಿಲೋ ಮೀಟರ್ ರೈಲ್ವೆ ವಿದ್ಯುದ್ದೀಕರಣ ಆಗಿದೆ. ಕಾಂಗ್ರೆಸ್ 50 ವರ್ಷ ಏನ್ ಮಾಡಿದೆ ನಾವು ಏಳು ವರ್ಷದಲ್ಲಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ನವರ ದುರಹಂಕಾರ ಕಡಿಮೆ ಆಗಿಲ್ಲ: ಕಾಂಗ್ರೆಸ್ಗೆ ಕಳೆದ ಎರಡು ಲೋಕಸಭೆಯಲ್ಲಿ ವಿರೋಧ ಪಕ್ಷದ ಅರ್ಹತೆ ಸಿಗಲಿಲ್ಲ. ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಅದು ಕೂಡ ಈಗ ಹೋಗುವುದಿದೆ. ಉತ್ತರ ಪ್ರದೇಶ, ಉತ್ತರಕಾಂಡದಲ್ಲಿ ಕಾಂಗ್ರೆಸ್ ಖಾತೆ ಕಳೆದುಕೊಂಡಿದೆ. ಆದರೂ ಕಾಂಗ್ರೆಸ್ ನವರ ದುರಹಂಕಾರ ಕಡಿಮೆ ಆಗಿಲ್ಲ. ನಾವು ಕೆಂಪೇಗೌಡ ಏರಪೋರ್ಟ್ ಮಾಡಿದ್ದೇವೆ ಅಂತಾರೆ. ಇದು ಯಡಿಯೂರಪ್ಪ ಕಾಲದಲ್ಲಿ ರೆಸ್ಯೂಲೇಶನ್ ಆಗಿದ್ದು. ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಬೇಕಿಲ್ಲ, ಜನರ ಕಲ್ಯಾಣ ಬೇಕಿಲ್ಲ. ನಿಮಗೆ ಬೇಕಾಗಿರುವುದು ರಾಜಕಾರಣ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪನೆಗೆ ಚಿಂತನೆ: ಶಾಸಕ ತನ್ವೀರ್ ಸೇಠ್