ಧಾರವಾಡ: ನಾವು ತೋರಿಸಬೇಕಾಗುವುದು ಛತ್ರಪತಿ ಶಿವಾಜಿ, ಮಹಾಭಾರತದ ಕೃಷ್ಣರ ಇತಿಹಾಸವನ್ನೇ ಹೊರತು, ಮತಾಂದಧ ಟಿಪ್ಪುಸುಲ್ತಾನದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿದ್ದ ಟಿಪ್ಪು ಕುರಿತ ಇತಿಹಾಸವನ್ನು ತೆಗೆಯುತ್ತೇವೆಂಬ ಸಿಎಂ ಬಿಎಸ್ ಯಡಿಯೂರಪ್ಪನವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ನಮಗೆ ಯಾರ ಬೆಂಬಲದ ಅಗತ್ಯವಿಲ್ಲವೆಂದು ಹೇಳಿದರು. ಕುಮಾರಸ್ವಾಮಿಯವರು ನಮಗೆ ಬೆಂಬಲ ನೀಡುವುದಾದರೆ ನಾವು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ಕೈಬಿಟ್ಟು ಉಮೇಶ ಕತ್ತಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಎಲ್ಲಾ ವಿಚಾರಗಳು ಕೇವಲ ಊಹಾಪೋಹಗಳಷ್ಟೇ ಇಂತಹ ಮಾತುಗಳಿಗೆ ನಾನು ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದರು. ಉಮೇಶ ಕತ್ತಿ ನಮ್ಮ ಪಕ್ಷದ ಹಿರಿಯರು. ಆದರೆ ಲಕ್ಷ್ಮಣ ಸವದಿ ಅವರನ್ನ ಡಿಸಿಎಂ ಸ್ಥಾನದಿಂದ ಕೈಬಿಡುತ್ತಾರೆ ಎಂಬ ಮಾತುಗಳು ಆಧಾರರಹಿತ ಎಂದರು.
ಸ್ಪೀಕರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯನವರು ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಮಾತನಾಡಿದ ಅವರು, ಹಿರಿಯ ರಾಜಕಾರಣಿಯಾಗಿ ಸಿದ್ಧರಾಮಯ್ಯ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಸಭಾಧ್ಯಕ್ಷರಿಗೆ ಈ ರೀತಿ ಏಕವಚನದಲ್ಲಿ ಮಾತನಾಡುವುದು ಅವರನ್ನು ಹೆದರಿಸುವ ರೀತಿಯಲ್ಲಿದೆ ಎಂದರು. ಕ್ಷುಲ್ಲಕ ಮಾತುಗಳನ್ನಾಡುವ ಮೂಲಕ ಅವರು ತಮ್ಮ ಘನತೆ ಮತ್ತು ಗೌರವ ಕಳೆದುಕೊಳ್ಳಬಾರದು ಎಂದರು.