ಹುಬ್ಬಳ್ಳಿ :ಕೋವಿಡ್ ಸೇರಿದಂತೆ ಎಲ್ಲಾ ಹಗರಣಗಳನ್ನು ಕಾಂಗ್ರೆಸ್ ಸರ್ಕಾರ ತನಿಖೆ ಮಾಡಿಸಲಿ. ಇದಕ್ಕೆ ನನ್ನ ಯಾವುದೇ ತಕರಾರು ಇಲ್ಲ. ಆದರೆ ತನಿಖೆ ಮಾಡಿಸುವ ಬದಲು ನೇರವಾಗಿ ಎಫ್ಐಆರ್ ದಾಖಲು ಮಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ತನಿಖಾ ಆಯೋಗಕ್ಕೆ ಮುಖ್ಯಸ್ಥರಾಗಿ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿಗಳು ತಮ್ಮ ನಿವೃತ್ತಿಯ ನಂತರ ದಿನ ಬೆಳಗಾದರೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಬೇಕಂತಲೇ ನಿವೃತ್ತ ನ್ಯಾಯಮೂರ್ತಿಗಳನ್ನು ಇಟ್ಟು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇನ್ನೊಂದು ಹೆಸರೇ ಭ್ರಷ್ಟಾಚಾರ. ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ನ ಅತ್ಯುನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬೇಲ್ ಮೇಲೆ ಹೊರಗಡೆ ಇದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತ ಪಾರದರ್ಶಕ ತನಿಖೆಗೆ ನಮ್ಮ ಅಭ್ಯಂತರವಿಲ್ಲ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಯುಪಿಎ ಹೆಸರನ್ನು ಬದಲಾವಣೆ ಮಾಡಿದೆ. ಬ್ರ್ಯಾಂಡ್ ಹೆಸರು ಕೆಟ್ಟು ಹೋದ ಸಂದರ್ಭದಲ್ಲಿ ಹೇಗೆ ಅಂಗಡಿ, ಫ್ಯಾಕ್ಟರಿ ಹೆಸರು ಬದಲಾವಣೆ ಮಾಡುತ್ತೇವೆಯೋ, ಹಾಗೆಯೇ ಕಾಂಗ್ರೆಸ್ ಯುಪಿಎ ಹೆಸರನ್ನು ಬದಲಾವಣೆ ಮಾಡಿದೆ. ಬ್ರ್ಯಾಂಡ್ ಹೆಸರು ಮಾತ್ರ ಬದಲಾವಣೆ ಆಗಿದೆ. ಆದರೆ ಪ್ರಾಡಕ್ಟ್ ಮಾತ್ರ ಅದೇ ಇದೆ ಎಂದು ಸಚಿವ ಜೋಶಿ ಟೀಕಿಸಿದರು.