ಧಾರವಾಡ : ಸಲಾಂ ಆರತಿಯನ್ನು ಬದಲಾಯಿಸಿದ್ದು ಸಂತೋಷದ ವಿಚಾರ. ಕನ್ನಡ ಭಾಷೆಯಲ್ಲೂ ನಮಸ್ಕಾರ ಎಂದು ಹೇಳುತ್ತಾರೆ. ಸಂಸ್ಕೃತದಲ್ಲೂ ನಮಸ್ಕಾರ ಎಂದು ಹೇಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಮುಮ್ಮಿಗಟ್ಟಿ ಬಳಿಯ IIT ವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಲಾಮಿ ಸಂಸ್ಕೃತಿ ಕೈ ಬಿಡಬೇಕು, ನಮ್ಮ ಸಂಸ್ಕೃತಿ ಇಟ್ಟುಕೊಂಡು ಮುಂದೆ ಹೋಗಬೇಕು. ಈ ಕಾರಣಕ್ಕೆ ನಾನು ಸಲಾಂ ಆರತಿ ಕೈಬಿಟ್ಟಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಇನ್ನು, ಗುಜರಾತ್ ಮಾದರಿ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಆಡಳಿತದಲ್ಲಿ ಗುಜರಾತ್ ಮಾದರಿ ಮಾಡಲು ನಮ್ಮ ಆಗ್ರಹ ಇದ್ದೇ ಇದೆ. ಕಳೆದ 8 ವರ್ಷದಿಂದ ನಾನು ಪ್ರಧಾನಿ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಸಂಗತಿ ಎಲ್ಲೇ ನಡೆದರೂ ಅದನ್ನು ತೆಗೆದುಕೊಳ್ಳಬೇಕು. ಕರ್ನಾಟಕದಲ್ಲೂ ಗುಜರಾತ್ ಮಾದರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜಕೀಯವಾಗಿ ಅಭ್ಯರ್ಥಿಗಳನ್ನು ತೆಗೆದುಹಾಕುವ ಬಗ್ಗೆ ನಾನು ಈಗಲೇ ಏನೂ ಹೇಳುವುದಿಲ್ಲ. ಟಿಕೆಟ್ ಹಂಚುವ ಸಂದರ್ಭ ಬಂದಾಗ ಗೆಲುವು, ಪಕ್ಷದ ನಿಷ್ಠೆ, ಬಿಜೆಪಿ ಆಡಳಿತಕ್ಕೆ ಬದ್ಧತೆ, ನಡೆ ನುಡಿಯಲ್ಲಿ ಸ್ವಚ್ಛತೆ ಎಲ್ಲವನ್ನು ಪರಿಗಣಿಸಿ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು.