ಹುಬ್ಬಳ್ಳಿ :ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯುತ್ತಿದ್ದು, ಪಾಲಿಕೆ ಕಾರ್ಪೊರೇಟರ್‌ಗಳು, ಬಿಜೆಪಿ ಪದಾಧಿಕಾರಿಗಳು, ಮುಖಂಡರುಗಳು ಭಾಗವಹಿಸಿದ್ದಾರೆ.
ಶೆಟ್ಟರ್ ಬೆಂಬಲಿಸಿ ರಾಜೀನಾಮೆಗೆ ಮುಂದಾಗಿದ್ದವರ ಮನವೊಲಿಕೆ ಜೊತೆಗೆ ಪಕ್ಷದ ತೀರ್ಮಾನದ ವಿರುದ್ಧ ಮಾತನಾಡದಂತೆಯೂ ಜೋಶಿ ಸಭೆಯಲ್ಲಿ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸಭೆಯಲ್ಲಿ ಭಾಗವಹಿಸಿರುವವರಿಗೆ ಸೂಚನೆ ನೀಡಿರುವ ಅವರು, ಜಗದೀಶ್ ಶೆಟ್ಟರ್‌ಗೆ ಠಕ್ಕರ್ ಕೊಡಲು ಬಿಜೆಪಿ ಪಡೆಯನ್ನು ಸನ್ನದ್ಧಗೊಳಿಸುತ್ತಿದ್ದಾರೆ.
ಇದನ್ನೂ ಓದಿ :'ನಮ್ಮ ಮನೆಯಿಂದಲೇ ನಮ್ಮನ್ನು ಹೊರಹಾಕಿದಂತಾಯಿತು'.. ರಾಜೀನಾಮೆ ಬಳಿಕ ಶೆಟ್ಟರ್ ಹೀಗಂದ್ರು
ಸಭೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಡಾ.ಮಹೇಶ್ ನಾಲವಾಡ್, ಪಾಲಿಕೆ ಉಪಮೇಯರ್ ಉಮಾ ಮುಕುಂದ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಕಪಟಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.
ಬಿಜೆಪಿ ಪ್ರಬಲ ನಾಯಕರಲ್ಲೊಬ್ಬರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಹೊರ ನಡೆದಿದ್ದಾರೆ. ಹುಬ್ಬಳ್ಳಿ- ಧಾರವಾಡ ಕ್ಷೇತ್ರದಲ್ಲಿ ಸತತವಾಗಿ 6 ಬಾರಿ ಗೆದ್ದು ಮೂರು ದಶಕಗಳ ಕಾಲ ಬಿಜೆಪಿಯಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಶೆಟ್ಟರ್ ಹೈಕಮಾಂಡ್ ಟಿಕೆಟ್ ನೀಡದಿರುವುದರ ವಿರುದ್ಧ ಅಸಮಾಧಾನಗೊಂಡು ಪಕ್ಷ ತ್ಯಜಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ: ಇಂದು ಶಿರಸಿಗೆ ಆಗಮಿಸಿದ ಶೆಟ್ಟರ್ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ :ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..