ಧಾರವಾಡ: ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಚಾರ ನಡೆಸಿದರು. ಹುಬ್ಬಳ್ಳಿ ಅಗಸಿಯಿಂದ ಪ್ರಚಾರ ಕಾರ್ಯ ಆರಂಭಿಸಿದ ಅವರು ವಿನಯ್ ಪರ ಮತಯಾಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ ಕುಲಕರ್ಣಿ ಪರ ಪತ್ನಿ ಶಿವಲೀಲಾ ಪ್ರಚಾರದ ನೇತೃತ್ವ ವಹಿಸಿದ್ದಾರೆ. ವಿನಯ ಕುಲಕರ್ಣಿ ನೇರವಾಗಿ ಬಂದು ಚುನಾವಣೆ ಪ್ರಚಾರ ಮಾಡಲು ತೊಂದರೆಯಾಗುತ್ತಿದೆ. ಇದು ಒಂದು ಷಡ್ಯಂತ್ರ ನಡೆದಿದೆ. ಅವರ ಆಪ್ತರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರ ಬೆಂಬಲಿಗರಿಗೆ ಪ್ರಚಾರ ಮಾಡಲು ಹಕ್ಕಿದೆ. ಯಾರ ಅವರ ಜೊತೆ ಇದ್ದಾರೆ ಅವರ ಮೇಲೆ ಐಟಿ ದಾಳಿ ನಡೆಸಿದ್ದರಿಂದ ಮಾನಸಿಕವಾಗಿ ಎಲ್ಲರೂ ಕುಗ್ಗಿದ್ದಾರೆ ಎಂದರು.
ಹೆದರಿಸುವ ತಂತ್ರ ನಡೆದಿದೆ. ಇದು ಬಹಳ ದಿನ ನಡೆಯಲ್ಲ, ಕೇಂದ್ರದಲ್ಲಿ ಅಧಿಕಾರ ಇದೆ ಎಂದು ಇಲ್ಲಿ ಒಬ್ಬ ಕೇಂದ್ರದ ಮಂತ್ರಿಗಳು ಈ ರೀತಿ ದಾಳಿ ಮಾಡಿಸುತಿದ್ದಾರೆ. ಇದು ಜನರಿಗೆ ಹೆದರಿಸುವ ಕೆಲಸ, ಆದರೆ ಇದನ್ನು ಮೆಟ್ಟಿ ನಿಂತು ಗ್ರಾಮೀಣದ ಜನ ಸ್ಪಷ್ಟವಾಗಿ ವಿನಯ್ ಅವರನ್ನು ವಿಶ್ವಾಸದಿಂದ ಆರಿಸಿ ತರಬೇಕು. ಈ ಎಲ್ಲದಕ್ಕೆ ಮತದಾರರು 13ಕ್ಕೆ ಉತ್ತರ ಕೊಡ್ತಾರೆ. ಐಟಿ ದಾಳಿ ಮಾಡಲು ಕೇಂದ್ರ ಸರ್ಕಾರ ಕಾರಣ. ಇದು ಐಟಿ ದಾಳಿ ಮಾಡುವ ಸಮಯವಲ್ಲ. ಚುನಾವಣೆ ಸಂದರ್ಭದಲ್ಲಿ ಮಾಡ್ತಾರೆ, ಭಯದಿಂದ ಯಾರು ಪ್ರಚಾರಕ್ಕೆ ಬರದಂತೆ ಮಾಡುವ ನೀತಿ ಇದು. ಇಲ್ಲಿ ಕೇಂದ್ರ ಸಚಿವರೇ ಇದಾರಲ್ಲ, ಅವರನ್ನು ಬಿಟ್ಟು ಯಾರು ಇದನ್ನು ಮಾಡಿಸ್ತಾರೆ ಎಂದು ದೂರಿದರು.
ಶೆಟ್ಟರ್, ಸವದಿ ಕಾಂಗ್ರೆಸ್ ಬಂದಿದ್ದಕ್ಕೆ ಲಿಂಗಾಯತ ಮತಗಳು ಕಾಂಗ್ರೆಸ್ ಕಡೆ ಬರಬಹುದಾ ಎಂಬ ವಿಚಾರಕ್ಕೆ ಮಾತನಾಡಿದ ಅವರು, ನಿನ್ನೆ ನಾನು ರೋಣ, ಹಾವೇರಿ ಗಜೇಂದ್ರಗಡ ಸೇರಿ ಹಲವು ಕಡೆ ಪ್ರಚಾರ ಮಾಡಿದ್ದೇನೆ. ಮಧ್ಯಾಹ್ನ ಹೋದರೆ ಬಿಸಿಲಲ್ಲೂ ಜನ ಸೇರಿದ್ರು, ಇದನ್ನು ನೋಡಿದರೆ ನಮಗೆ ಒಳ್ಳೆ ಬೆಂಬಲ ಸಿಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ಲಿಂಗಾಯತ ಸಮಾಜಕ್ಕೆ ಅನ್ಯಾಯ ಆಗುವುದನ್ನು ನೋಡಿ ಎಲ್ಲರೂ ಬಿಜೆಪಿಯಿಂದ ಹೊರಗೆ ಬರುತಿದ್ದಾರೆ. ಬಹಳ ಕಡೆ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಯಲ್ಲಿ ನಾನು ಅನುಭವಿಸಿ ಹೊರ ಬಂದಿದ್ದೇನೆ. ಅಪಮಾನ ಮಾಡಿ ನನಗೆ ತೊಂದರೆ ಮಾಡಿದ್ದರಿಂದ ಹೊರಗೆ ಬಂದಿದ್ದೇನೆ. ನಾನು ಕಟ್ಟಿದ ಮನೆಯಿಂದ ಹೊರಗೆ ಹಾಕಿದ್ದಾರೆ.
ಕೇಂದ್ರದಲ್ಲಿ ಇನ್ನಿತರ ಸಮಾಜದ ಸಚಿವರು ಇದ್ದಾರೆ. ನಾರಾಯಣಸ್ವಾಮಿ ದಲಿತ ಜನಾಂಗದ ಸಂಸದ, ಅವರು ಅಲ್ಲಿ ರಾಜ್ಯಮಂತ್ರಿ, ಶೋಭಾ ಕರಂದ್ಲಾಜೆ ವಕ್ಕಲಿಗರು, ಅವರು ರಾಜ್ಯ ಮಂತ್ರಿ ಲಿಂಗಾಯತ ಸಮಾಜದ ಭಗವಂತ ಖೂಬಾ ರಾಜ್ಯ ಮಂತ್ರಿ ಇದ್ದಾರೆ. ಸುರೇಶ ಅಂಗಡಿ ಕೂಡಾ ರಾಜ್ಯ ಮಂತ್ರಿ ಇದ್ದರು. ರಾಜ್ಯದಿಂದ 15 ಸಂಸದರಲ್ಲಿ ಕ್ಯಾಬಿನೆಟ್ನಲ್ಲಿ ಇರುವವರಲ್ಲಿ ಒಬ್ಬರೇ ಪ್ರಹ್ಲಾದ್ ಜೋಶಿ. ಉಳಿದವರಿಗೆ ರಾಜ್ಯ ಮಂತ್ರಿ ಮಾಡಿದ್ದಾರೆ. ಇಲ್ಲೇ ತಾರತಮ್ಯ ಎದ್ದು ಕಾಣುತ್ತಿದೆ. ಇನ್ನೊಬ್ಬರು ರಾಜ್ಯ ಸಭೆಗೆ ಆಯ್ಕೆಯಾದವರು ನಿರ್ಮಲಾ ಸೀತಾರಾಮನ್. ಇದೆಲ್ಲಾ ನೋಡಿದರೆ ಬಿಜೆಪಿಯಲ್ಲಿ ಏನು ನಡೀತಿದೆ ಎಂದು ತೋರಿಸುತ್ತಿದೆ. ಬಿಜೆಪಿ ಯಾರ ಕೈಯಲ್ಲಿದೆ ಎಂದು ಕಾಣುತ್ತಿದೆ. ಉಳಿದ ಸಮಾಜದವರು ನೊಂದಿದ್ದಾರೆ. ಅದಕ್ಕೆ ತಕ್ಕ ಪಾಠ ಚುನಾವಣೆಯಲ್ಲಿ ಸಿಗಲಿದೆ ಎಂದರು.