ಹುಬ್ಬಳ್ಳಿ:ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಮೀನಮೇಷ ಮಾಡುತ್ತಿಲ್ಲ. ಮಹದಾಯಿ ಯೋಜನೆಯ ಜಾರಿಗೆ ನಾವು ಬದ್ಧರಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಟೈಗರ್ ಕಾರಿಡಾರ್ ಇಕೋ ಸೆನ್ಸಿಟಿವ್ ಝೋನ್ಕ್ಕಾಗಿ ವಿಳಂಬ:ಮಹದಾಯಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ಎಂದು ಆಗ್ರಹಿಸಿ ತಮ್ಮ ನಿವಾಸದ ಬಳಿ ಧರಣಿ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಡಿಪಿಆರ್ಗೆ ಅನುಮತಿ ನೀಡಿದೆ. ಮಹದಾಯಿ ನೋಟಿಫಿಕೇಶನ್ ನಾವೇ ಮಾಡಿಸಿದ್ದೇವೆ. ಪರಿಸರ ವಿನಾಯಿತಿಯನ್ನು ಕೊಡಿಸಿದ್ದೇವೆ. ಗೆಜೆಟ್ ನೋಟಿಫಿಕೇಶನ್ ಜೊತೆಗೆ ಡಿಪಿಆರ್ ಒಪ್ಪಿಗೆ ಮಾಡಿದ್ದೇವೆ. ಆದರೇ ಟೈಗರ್ ಕಾರಿಡಾರ್ ಮತ್ತು ಇಕೋ ಸೆನ್ಸಿಟಿವ್ ಝೋನ್ ಕಾರಣಕ್ಕಾಗಿ ಮಹದಾಯಿ ವಿಳಂಬವಾಗಿದೆ ಎಂದು ತಿಳಿಸಿದರು.
ಹಸಿರು ನ್ಯಾಯಾಧೀಕರಣದ ಅನುಮತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಕೆಲ ಸ್ಪಷ್ಟೀಕರಣ ಕೇಳಿದೆ. ರಾಜ್ಯಮಟ್ಟದಲ್ಲಿ ವೈಲ್ಡ್ ಲೈಫ್ಗೆ ಅನುಮತಿ ಕೊಟ್ಟು ಕೇಂದ್ರಕ್ಕೆ ಕಳಿಸಬೇಕಿದೆ. ರಾಜ್ಯ ಸರ್ಕಾರ ಅನುಮತಿ ಕೊಡುವುದು ಬಾಕಿ ಇದ್ದು, ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾದ ನಿಲುವು ಹೊಂದಿದೆ ಎಂದು ವಿವರಣೆ ನೀಡಿದರು.
ಮಹದಾಯಿ ಟ್ರಿಬ್ಯುನಲ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರದ ಜೊತೆಗೆ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ನಾವು ಡಿಪಿಆರ್ ಅನುಮತಿ ನೀಡಿದ್ದನ್ನು ಗೋವಾ ಸರ್ಕಾರ ಆಕ್ಷೇಪಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇನೆ. ಕರ್ನಾಟಕ ವೈಲ್ಡ್ ಲೈಫ್ ಬೋರ್ಡ್ನಲ್ಲಿ ಶಿಫಾರಸ್ಸು ಮಾಡಬೇಕು. ಇದನ್ನು ಕಳಿಸಿದರೇ ನಾವು ಖಂಡಿತ ಅನುಮತಿ ನೀಡುತ್ತೇವೆ ಎಂದು ಭರವಸೆ ನೀಡಿದರು.